ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಈ ಫಲಿತಾಂಶ ಸೆಮಿಫೈನಲ್ ಅಲ್ಲ'

Lingaraj Badiger
Updated On : 9 Dec 2013, 10:58 am

ಮಂಗಳೂರು: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ಸೆಮಿ ಫೈನಲ್ ಅಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
 ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಲಭಿಸಿದರೂ, ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿತು. ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಆಗಲಿದೆ ಎಂದು ಭವಿಷ್ಯ ನುಡಿದರು. ದೇಶದಲ್ಲಿ ನರೇಂದ್ರ ಮೋದಿ ಅಲೆ ಇಲ್ಲ, ಆದರೆ ರಾಜಕೀಯ ಧ್ರುವೀಕರಣ ಶಕ್ತಿಯ ಪರಿಣಾಮ ಇರುವುದು ನಿಜ. ಎನ್‌ಡಿಎ ಜತೆ ಹೊಂದಾಣಿಕೆಗೆ ಮಿತ್ರ ಪಕ್ಷಗಳು ಹಿಂದೇಟು ಹಾಕುತ್ತಿವೆ. ಬಿಜೆಪಿ ಏಕಪಕ್ಷೀಯವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜಯಲಲಿತಾ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್ ಮತ್ತಿತರರು ಮೋದಿ ಇರುವಲ್ಲಿ ಬಿಜೆಪಿ ಜತೆ ಕೈಜೋಡಿಸಲು ಸಾಧ್ಯವಿಲ್ಲ. ಈ ಛಾತಿ ಇದ್ದರೆ ಕಾಂಗ್ರೆಸ್‌ಗೆ ಮಾತ್ರ ಎಂದರು.
ಮೇ ಪ್ರಥಮ ಚುನಾವಣೆ: 2014 ಮೇ ಪ್ರಥಮ ವಾರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ಎದುರಿಸಲು ಕಾಂಗ್ರೆಸ್ ಸರ್ವಸನ್ನದ್ಧವಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಮೂರನೇ ಅವಧಿಗೂ ಆಡಳಿತ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು. ತೃತೀಯ ರಂಗದ ಬಗ್ಗೆ ತಾನೇನೂ ಮಾತನಾಡುವುದಿಲ್ಲ ಎಂದರು.
 ಅಡಕೆ ನಿಷೇಧಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅಪೀಲು ಸಲ್ಲಿಸಿದ ಪ್ರಶ್ನೆಗೆ 'ಹಾಗೆ ಸಾಧ್ಯವಿಲ್ಲ' ಎಂದು ಉತ್ತರಿಸಿದರು. ಅಡಕೆಯಲ್ಲಿನ ಹಾನಿಕಾರಕ ಅಂಶ ನಿಷೇಧಿಸುವ ಪ್ರಸ್ತಾಪ ಮಾತ್ರ ಕೇಂದ್ರದ ಮುಂದಿದ್ದು, ಅಡಕೆ ಆರೋಗ್ಯಕ್ಕೆ ಪೂರಕವಾಗಿದ್ದು, ಅದನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪುತ್ರ ಹರ್ಷ ಮೊಯ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಬಗೆಗಿನ ಪ್ರಶ್ನೆಗೆ, ಆತನನ್ನೇ ಕೇಳಿ ಎಂದು ವೀರಪ್ಪ ಮೊಯ್ಲಿ ಉತ್ತರಿಸಿದರು.
ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ, ಕಾಂಗ್ರೆಸ್ ಮುಖಂಡ ಅಶ್ವಿನ್ ಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement