ಕ್ಷೀರಭಾಗ್ಯ ಅಡುಗೆ ಸಹಾಯಕರಿಗೆ ದೊರಕಿಲ್ಲ ವೇತನ ಭಾಗ್ಯ!
ಮಂಗಳೂರು: ಕಳೆದ 3 ತಿಂಗಳಿನಿಂದ ದ.ಕ. ಜಿಲ್ಲೆಯ ಕ್ಷೀರಭಾಗ್ಯ ಅಡುಗೆ ಸಹಾಯಕಿಯರಿಗೆ ವೇತನ ಸಿಕ್ಕಿಲ್ಲ. ಇನ್ನೇನು ವೇತನ ಬ್ಯಾಂಕ್ ಖಾತೆಗೆ ತಲುಪಿದೆ ಎಂದಾಕ್ಷಣ ಆ ಮೊತ್ತ ವಯಸ್ಕರ ಶಿಕ್ಷಣ ನಿಧಿಯ ಪಾಲಾಯಿತು!
ಇದು ಅಕ್ಷರ ದಾಸೋಹ ಇಲಾಖೆ ಮಾಡಿದ ಅವಾಂತರ. ಅಡುಗೆ ಸಹಾಯಕಿಯರು ವೇತನ ಪಡೆಯಲು ಬ್ಯಾಂಕ್ ಖಾತೆ ತೆರೆಯುವಂತೆ ಶಾಲೆಗಳಿಗೆ ಸೂಚನೆ ನೀಡಿತ್ತು. ಇದರಂತೆ ಎಲ್ಲ ಮಾಹಿತಿಯನ್ನು ಶಾಲಾ ಶಿಕ್ಷಕರು ತಾಲೂಕು ಕಚೇರಿಗೆ ಸಲ್ಲಿಸಿದ್ದರು. ಡಿ. 7 ರಂದು ವೇತನ ಆಗುತ್ತದೆ ಎಂಬ ಭರವಸೆ ನೀಡಿದ್ದರು.
ಸರ್ಕಾರದಿಂದ ಹಣ ಅಕ್ಷರ ದಾಸೋಹಕ್ಕೆ ಬಿಡುಗಡೆಯಾಗಿದೆ. ಆದರೆ ಅಕ್ಷರ ದಾಸೋಹ ಇಲಾಖೆ ಮಾಡಿದ ತಪ್ಪಿನಿಂದಾಗಿ ಮೊತ್ತ ವಯಸ್ಕರ ಶಿಕ್ಷಣ ನಿಧಿಗೆ ಜಮೆ ಆಗಿದೆ. ಇದರಿಂದ ಸಂಬಳಕ್ಕಾಗಿ ಕಾದಿರುವ ಅಡುಗೆ ಸಹಾಯಕಿಯರು ನಿರಾಸೆಗೊಂಡಿದ್ದಾರೆ. ಇದರ ಪರಿಣಾಮ ಶಿಕ್ಷಕರು ಅನುಭವಿಸುತ್ತಿದ್ದಾರೆ.
ರು. ಸಾವಿರ ವೇತನ ನಿಗದಿ: ದ.ಕ. ಜಿಲ್ಲೆಯ 149 ಶಾಲೆಗಳಿಗೆ ಇಸ್ಕಾನ್ ಸಂಸ್ಥೆಯ ಅಕ್ಷರ ಪಾತ್ರೆ ಯೋಜನೆಯಿಂದ ಊಟ ರವಾನೆಯಾಗುತ್ತದೆ. ಬಿಸಿಯೂಟ ಜವಾಬ್ದಾರಿ ವಹಿಸಿಕೊಂಡ ಇಸ್ಕಾನ್ ಸಂಸ್ಥೆ ಕ್ಷೀರಭಾಗ್ಯ ಯೋಜನೆಯ ಭಾರ ಹೊರಲು ನಿರಾಕರಿಸಿತು.
ಆದ್ದರಿಂದ ಹಾಲು ಕಾಯಿಸಲು ಅಡುಗೆ ಸಹಾಯಕಿಯರನ್ನು ಶಾಲೆ ಶಿಕ್ಷಕರು ನೇಮಿಸಿದರು. ಇವರಿಗೆ ಸರ್ಕಾರ ನೀಡಿದ ರು. 1 ಸಾವಿರ ವೇತನ ಮಾತ್ರ ಇನ್ನೂ ಸಿಕ್ಕಿಲ್ಲ.
ಶಾಲೆಯ 50 ಮಕ್ಕಳಿಗೆ ಒಬ್ಬರಂತೆ ಸಹಾಯಕಿಯರನ್ನು ನೇಮಕಗೊಳಿಸಲು ಅನುಮತಿ ನೀಡಿದ ಸರ್ಕಾರವು ಪ್ರತಿಯೊಬ್ಬರಿಗೆ ರು. 1 ಸಾವಿರ ವೇತನ ನೀಡುವುದಾಗಿ ಭರವಸೆ ನೀಡಿತ್ತು.
ವೇತನವು ನೇರವಾಗಿ ಶಿಕ್ಷಕರಿಗೆ ದೊರಕದೆ ಅಕ್ಷರ ದಾಸೋಹ ಇಲಾಖೆ ತಾಲೂಕು ಕಚೇರಿಗೆಗಳಿಗೆ ವರ್ಗಾಯಿಸಿದೆ. ಅಲ್ಲದೆ ಅಡುಗೆ ಸಹಾಯಕಿಯರ ಬ್ಯಾಂಕ್ ಖಾತೆ ತೆರೆಯುವಂತೆ ಶಿಕ್ಷಕರಿಗೆ ಸೂಚನೆ ನೀಡಿತ್ತು.
ಅದರಂತೆ ಬ್ಯಾಂಕ್ ಖಾತೆ ನಂಬರ್ ತಾಲೂಕು ಕಚೇರಿಗೆ ನೀಡಿದ ಶಿಕ್ಷಕರಿಗೆ ಡಿ. 7 ರಂದು ವೇತನ ಸಿಗುತ್ತದೆ ಎಂಬುವುದಾಗಿ ಅಕ್ಷರ ದಾಸೋಹ ಇಲಾಖೆ ಹೇಳಿತ್ತು.
ಆದರೆ ಡಿ. 7 ರಂದು ಬ್ಯಾಂಕ್ ಖಾತೆ ಹಣ ಜಮಾ ಆಗದಿರುವ ಕಾರಣ ಶಿಕ್ಷಕರು ಜಿಲ್ಲಾ ಖಜಾನೆಯಲ್ಲಿ ವಿಚಾರಿಸಿದಾಗ ಅಲ್ಲಿ, ಕ್ಷೀರಭಾಗ್ಯಕ್ಕೆ ಸಲ್ಲಿಕೆಯಾಗಬೇಕಾದ ಹಣ ಇಲಾಖೆ ತಪ್ಪಿನಿಂದ ವಯಸ್ಕರ ಶಿಕ್ಷಣಕ್ಕೆ ಜಮೆಯಾಗಿರುವುದು ತಿಳಿದು ಬಂದಿದೆ.
ಅಂಗನವಾಡಿಯಿಂದ 10ನೇ ತರಗತಿವರೆಗೆ ಕ್ಷೀರಭಾಗ್ಯ ಯೋಜನೆಯಡಿ ಬಿಸಿ ಬಾಲು ವಿತರಣೆಯಾಗುತ್ತಿದೆ.
ಪ್ರತಿಯೊಂದು ಶಾಲೆಯಲ್ಲಿ 100ಕ್ಕಿಂತ ಅಧಿಕ ಮಕ್ಕಳಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿದಂತೆ ಶಾಲೆಯಲ್ಲಿ ಒಟ್ಟು 4 ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಬೇಗನೆ ಬಂದು ಹಾಲು ಕಾಯಿಸಿ ಮಕ್ಕಳಿಗೆ ನೀಡಿವುದಲ್ಲದೆ, ಪಾತ್ರೆಗಳನ್ನು ತೊಳೆಯುವುದು ಇವರ ಕೆಲಸ.
-ವಜ್ರಾಕ್ಷಿ ಬಂಟ್ವಾಳ