ಚಿನ್ನಾಭರಣ, ನಗದು ಅಕ್ರಮ ಸಾಗಾಟ: ನಾಲ್ವರ ಬಂಧನ
ಮಂಗಳೂರು: ದುಬೈನಿಂದ ವಿಮಾನ ಮೂಲಕ ನಗದು ಮತ್ತು ಚಿನ್ನಾಭರಣ ಅಕ್ರಮವಾಗಿ ಸಾಗಿಸುತ್ತಿದ್ದನ್ನು ಪತ್ತೆ ಮಾಡಿದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ. ವಿಮಾನದಲ್ಲಿ ಆಗಮಿಸಿದ ಕಾಸರಗೋಡು ತೆಕ್ಕಿಲ್ ನಿವಾಸಿ ಉಮ್ಮರ್ ಫಾರೂಕ್ (29), ಸಯ್ಯದ್ ಪಾಕಯರಮಡಮ್ (30) ಹಾಗೂ ಚಿನ್ನ ಸ್ವೀಕರಿಸಲು ಬಂದ ಚಟ್ಟೆಂಚಾಲ್ ಅಬ್ದುಲ್ ನಿಸಾರ್ (31), ಮುಹಮ್ಮದ್ ಕುಂಞ (55) ಬಂಧಿತ ಆರೋಪಿಗಳು. ಬಂಧಿತರಿಂದ 8,900 ಅಮೆರಿಕನ್ ಡಾಲರ್ ಮೌಲ್ಯದ 2 ಕೆ.ಜಿ. ಚಿನ್ನ , ರು. 1.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿದ್ದ ಉಮ್ಮರ್ ಫಾರೂಕ್, ಸಯ್ಯದ್ ತಮ್ಮಲ್ಲಿದ್ದ ಚಿನ್ನದ ಗಟ್ಟಿಯನ್ನು ಪ್ಯಾಂಟ್ ಕಿಸೆಯಿಂದ ತೆಗೆದು ಅಬ್ದುಲ್ ನಿಸಾರ್ ಹಾಗೂ ಮಹಮ್ಮದ್ ಕುಂಞಗೆ ಕೊಡುತ್ತಿದ್ದಂತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು.