ನಗರದಲ್ಲಿ ಸೈಕಲ್ ಸವಾರಿಯ ರಜಾ ಮಜಾ
ಮಂಗಳೂರು: 7ನೇ ಆರ್ಎಕ್ಸ್ ಲೈಫ್ ಬಿಎಸ್ಎ ಹರ್ಕ್ಯುಲಿಸ್ ಸೈಕಲ್ ರ್ಯಾಲಿ ಭಾನುವಾರ ನಗರದ ವಿವಿಧ ಕಡೆಗಳಲ್ಲಿ ಏರ್ಪಟ್ಟಿತು.
ಬೆಳಗ್ಗೆ 6.30ಕ್ಕೆ ಲೇಡಿಹಿಲ್ ಸರ್ಕಲ್ನಿಂದ ಹೊರಟ ಸೈಕಲ್ ರ್ಯಾಲಿಗೆ ಟಿಐ ಸೈಕಲ್ ಕಂಪನಿ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಸುಶಾಂತ್ ಹಸಿರು ನಿಶಾನೆ ತೋರಿಸಿದರು. ಕಂಪನಿ ಸೇಲ್ಸ್ ಮೆನೇಜರ್ ಅರುಣ್ ಕುಮಾರ್, ಜ್ಯೋತಿ ಲ್ಯಾಬರೋಟರೀಸ್ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ ಕಾಮತ್, ಶ್ರೀರಾಮ್ ಚಿಟ್ಸ್ ಉಪಾಧ್ಯಕ್ಷ ವಿಜಯ್ ಸಿಂಹ, ಐಡಿಯಲ್ ಐಸ್ಕ್ರೀಂ ಬಳಗದ ಮುಕುಂದ ಕಾಮತ್ ಮತ್ತಿತರರಿದ್ದರು. ರ್ಯಾಲಿಯಲ್ಲಿ 1751 ಮಂದಿ ಸವಾರರು ನೋಂದಾಯಿಸಿದ್ದು, ಇವರೆಲ್ಲ 7ರಿಂದ 83 ವರ್ಷದವರು. ನಗರದ ರಸ್ತೆಗಳಲ್ಲಿ 2 ಸಾವಿರಕ್ಕೂ ಮಿಕ್ಕಿ ಸೈಕಲ್ಗಳು ರ್ಯಾಲಿಯಲ್ಲಿ ಪಾಲ್ಗೊಂಡವು. ಲೇಡಿಹಿಲ್ನಿಂದ ಕೊಟ್ಟಾರ, ಕೂಳೂರು, ತಣ್ಣೀರುಬಾವಿ ಬೀಚ್ ರಸ್ತೆ, ಕೊಟ್ಟಾರ ಚೌಕಿ, ಮಾಲೆಮಾರ್ ರಸ್ತೆ, ದೇರೇಬೈಲು, ಬಿಜೈ ಮೂಲಕ ಭಾರತ್ಮಾಲ್.
18 ಕಿ.ಮೀ. ದೂರದ ಈ ರ್ಯಾಲಿ ಭಾರತ್ಮಾಲ್ನಲ್ಲಿ ಕೊನೆಗೊಳ್ಳುವಾಗ ಬೆಳಗ್ಗೆ 8.30. ಕೊನೆಯಲ್ಲಿ ಲಕ್ಕಿ ಡ್ರಾದಲ್ಲಿ ಸ್ವರೂಪ್ ಕೋಟ್ಯಾನ್, ವೈಶಾಖ್ ಶೆಟ್ಟಿ, ತಪಸ್ವಿ, ರಜತ ಕಾಮತ್, ವೇಣು ಭಂಡಾರಿ ಇವರನ್ನು ವಿಜೇತರೆಂದು ಘೋಷಿಸಲಾಯಿತು.