ಅನಧಿಕೃತ ವಿದ್ಯುತ್ ಸಂಪರ್ಕ: ರು. 3.47 ಕೋಟಿ ದಂಡ ವಿಧಿಸಿದ ಮೆಸ್ಕಾಂ ಜಾಗೃತದಳ
ಮಂಗಳೂರು: ಮೆಸ್ಕಾಂ ಜಾಗೃತದಳ ಅಧಿಕಾರಿಗಳು ಕೆಎಂಸಿ ಆಸ್ಪತ್ರೆಗೆ ದಾಳಿ ನಡೆಸಿ ದಂತ ವೈದ್ಯಕೀಯ ಕಾಲೇಜ್ ಮತ್ತು ಶಾಲೆಗೆ ಅನಧಿಕೃತವಾಗಿ 5 ವರ್ಷಗಳಿಂದ ವಿದ್ಯುತ್ ಸಂಪರ್ಕ ನೀಡಿರುವುದನ್ನು ಪತ್ತೆ ಹಚ್ಚಿದ್ದು, 3.47 ಕೋಟಿ ದಂಡ ವಿಧಿಸಿದ್ದಾರೆ.
ಹನೀಫ್ ಸಾಹೇಬ್ ಎಂಬವರ ದೂರಿನಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಮೆಸ್ಕಾಂ ಜಾಗೃತದಳ ಪೊಲೀಸರು ಸೋಮವಾರ ಅತ್ತಾವರ ಕೆಎಂಸಿ ಆಸ್ಪತ್ರೆ 7 ಅಂತಸ್ತಿನ ಕಟ್ಟಡ ಪರಿಶೀಲನೆ ನಡೆಸಿದರು. ವಿದ್ಯುತ್ ಬಳಕೆ ಮಾಡಿದ ಹಣವನ್ನು ಸರಿಯಾಗಿ ಪಾವತಿಸಲಾಗಿದೆ. ಆದರೆ ಎಳು ಅಂತಸ್ತಿನ ಕಟ್ಟಡಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತ್ಯೇಕ ವಿದ್ಯುತ್ ಸಂಪರ್ಕ ಲಭಿಸಿಲ್ಲ. ಆದ್ದರಿಂದ ಮೆಸ್ಕಾಂ ಅನುಮತಿ ಪಡೆಯದೆ ಸಂಪರ್ಕ ಕಲ್ಪಿಸಿದ್ದರು..
ಎಸ್‌ಪಿ ಪಿ.ಹರಿಶ್ಚಂದ್ರ, ಡಿವೈಎಸ್‌ಪಿ ವಿನಯ ಗಾಂವ್ಕರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು. ಭೂಗತ ಕೇಬಲ್‌ಗಳ ಮೂಲಕ ದಂತ ವೈದ್ಯಕೀಯ ಕಾಲೇಜ್‌ಗೆ ಕೆಎಂಸಿಯಿಂದ ವಿದ್ಯುತ್ ಅನಧಿಕೃತವಾಗಿ ಸರಬರಾಜು ಮಾಡಿರುವುದು ಬೆಳಕಿಗೆ ಬಂತು.
ಇಂಥ ಅನಧಿಕೃತ ಸಂಪರ್ಕಗಳಿಂದ ಶಾರ್ಟ್‌ಸರ್ಕ್ಯೂಟ್ ದುರಂತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ವೈದ್ಯಕೀಯ ಕಾಲೇಜ್ ದಂಡ ನೀಡುವಲ್ಲಿ ವಿಳಂಬವಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಎಚ್ಚರಿಕೆ ನೀಡಿದೆ.
ಮಹಾನಗರ ಪಾಲಿಕೆ ಕಟ್ಟಡ ಸಕ್ರಮಗೊಳಿಸುವುದನ್ನು ನಿರೀಕ್ಷಿಸುತ್ತಿದ್ದೆವು. ಸಕ್ರಮಗೊಳಿಸಿದರೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆಯಬಹುದು. ಕಾಲೇಜ್ ಕೆಎಂಸಿ ಆಸ್ಪತ್ರೆಯ ಯುನಿಟ್‌ನಿಂದ ವಿದ್ಯುತ್ ಸರಬರಾಜಾಗುತ್ತಿದೆ. ವಿದ್ಯುತ್ ಬಿಲ್ ಸರಿಯಾಗಿ ಪಾವತಿಸುತ್ತಿದ್ದೇವೆ ಎಂದು ಕೆಎಂಸಿ ಮೂಲಗಳು ತಿಳಿಸಿವೆ.