ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

Lingaraj Badiger
Updated On : 10 Dec 2013, 12:14 pm

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿ ಸೋಮವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.
 ದೇವಳದಿಂದ  ಬಂಡಿ ರಥದಲ್ಲಿ ಶ್ರೀ ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು. ಬಳಿಕ ಕುಮಾರಾಧಾರಾ ನದಿ ತಟದವರೆಗೆ ಸಾಗಿ ಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾ ವಿಹಾರ, ಬಳಿಕ ಅವಭೃತೋತ್ಸವ ನಡೆಯಿತು.
 ದೇವಳದ ಪ್ರಧಾನ ಅರ್ಚಕ ವೇ.ಮೂ. ಕೇಶವ ಜೋಗಿತ್ತಾಯರ ಹಿರಿತನದಲ್ಲಿ ಅರ್ಚಕ ವೃಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ನಂತರ ಕುಮಾರಧಾರೆಯಲ್ಲಿನ ಕಟ್ಟೆಯಲ್ಲಿ ಶ್ರೀ ದೇವರಿಗೆ ವಿಶೇಷ ಕಟ್ಟೆಪೂಜೆ ನೆರವೇರಿತು.  ಸಾವಿರಾರು ಭಕ್ತಾದಿಗಳು ಭಕ್ತಿ, ಶ್ರದ್ಧೆಯಿಂದ ಶ್ರೀ ದೇವರೊಂದಿಗೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮಾಡಿದರು. ಶ್ರೀ ಕ್ಷೇತ್ರದ ಆನೆ ಯಶಸ್ವಿಯು ನದಿ ನೀರಿನಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸಿತು. ಶ್ರೀ ದೇವರ ಅವಭೃತೋತ್ಸವದ ಬಳಿಕ ಕುಮಾರಾಧಾರಾದಿಂದ ಶ್ರೀ ದೇವಳದವರೆಗೆ ಅಂಗಡಿ ಹಾಗೂ ಇನ್ನಿತರ ವ್ಯಾಪಾರಸ್ಥರು ಮತ್ತು ಮನೆಯವರು ಫಲ ಪುಷ್ಪ ಆರತಿ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು.  ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಕಾರ್ಯನಿರ್ವಹಣಾಧಿಕಾರಿ ಎಂ.ನಾಗರಾಜ್ (ಪ್ರಭಾರ), ಸಹಾಯಕ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾ ಸುಬ್ರಹ್ಮಣ್ಯ ಭಟ್ ಮನಾಡು, ವನಜಾ ವಿ. ಭಟ್, ಮೋನಪ್ಪ ಮಾನಾಡು, ಕಿಶೋರ್ ಕುಮಾರ್ ಶಿರಾಡಿ, ಮೋಹನ್‌ರಾಮ್ ಸುಳ್ಳಿ, ಚಂದ್ರಶೇಖರ್ ತಳೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement