ಪತಿಯ ದೈಹಿಕ ವಾಂಛೆಯೇ ಅನಾಹುತಕ್ಕೆ ಕಾರಣ: ಪತ್ನಿ
ಪುತ್ತೂರು: ತನ್ನ ಪತಿ ರಮೇಶ್ ನಾಯ್ಕನ ದೈಹಿಕ ವಾಂಛೆಯೇ ಎಲ್ಲ ಅನಾಹುತಗಳಿಗೆ ಕಾರಣ ಎಂದು ಅವರ ಪತ್ನಿ ಸುಂದರಿ ತಿಳಿಸಿದ್ದಾರೆ.
ಶನಿವಾರ ಮೊತ್ತಮೊದಲ ಬಾರಿಗೆ ಮಾಧ್ಯಮಗಳಿಗೆ ಸ್ಪಂದಿಸಿದ ಅವರು, ತನ್ನ ಸಹೋದರಿಯೊಂದಿಗೆ ರಮೇಶ್ ಕೆಲ ಸಮಯಗಳಿಂದ ಸಂಬಂಧವಿರಿಸಿಕೊಂಡಿದ್ದರು. ಈ ಬಗ್ಗೆ ನನ್ನ ಬಳಿ ಆಕೆಯೇ ತಿಳಿಸಿದ್ದಳು ಎಂದು ಸುಂದರಿ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಪುತ್ತೂರಿನ ಪತ್ರಿಕಾ ಭವನಕ್ಕೆ ಆಗಮಿಸಿದ ಸುಂದರಿ, ಪ್ರಕರಣದ ಹಿಂದಿನ ಸತ್ಯಗಳನ್ನು ಬಿಚ್ಚಿಟ್ಟರು. ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ ಅವರು ಕಣ್ಣೀರು ಸುರಿಸುತ್ತಲೇ ಘಟನೆಯ ಬಗ್ಗೆ ವಿವರಿಸಿದರು.
ದೇವರೇ ಶಿಕ್ಷೆ ಕೊಟ್ಟ: ನನ್ನ ಪತಿಯು ಕ್ಷಮಿಸಲಾರದ ತಪ್ಪು ಮಾಡಿದ್ದು, ಮಾಡಿರುವ ಅನ್ಯಾಯಕ್ಕೆ ದೇವರು ನ್ಯಾಯಾಧೀಶರ ರೂಪದಲ್ಲಿ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆ ಖಾಯಂ ಆದಾಗ ಇವರಿಂದಾಗಿ ಮೃತಪಟ್ಟವರಿಗೆ ನ್ಯಾಯ ಒದಗಿಸಿಂತಾಗುತ್ತದೆ ಎಂದಿದ್ದಾರೆ.
ನಾನು ತುಮಕೂರಿನಿಂದ ವರ್ಗಾವಣೆಗೊಂಡು ಮಂಗಳೂರಿಗೆ ಬಂದ ಬಳಿಕ ತುಮಕೂರಿನ ಭವಿಷ್ಯನಿಧಿ ಕಚೇರಿಯಲ್ಲಿ ಉದ್ಯೋಗದಲ್ಲಿದ್ದ ಸಹೋದರಿ, ಅಲ್ಲಿರುವ ನಮ್ಮ ಮನೆಯಲ್ಲಿ ವಾಸವಾಗಿದ್ದಳು. 'ರಮೇಶ್ ತನಗೆ ಕಿರುಕುಳ ನೀಡುತ್ತಾರೆ, ಆಫೀಸ್ಗೆ ಫೋನ್ ಮಾಡಿ ಬೈಯುತ್ತಿದ್ದಾರೆ. ನನ್ನ ಮೇಲಧಿಕಾರಿಗಳಿಗೂ ಫೋನ್ ಮಾಡಿ ನನ್ನ ಬಗ್ಗೆ ಏನೆಲ್ಲಾ ಹೇಳುತ್ತಾರೆ' ಎಂದು ನನಗೆ ಸಹೋದರಿ ತಿಳಿಸಿದ್ದಳು. ಆದರೆ ಮರ್ಯಾದೆಗಂಜಿ ಬೇರೆ ಯಾವ ವಿಷಯವನ್ನು ಆಕೆ ತಿಳಿಸಿರಲಿಲ್ಲ. ಸಹೋದರಿಯ ಸಹೋದ್ಯೋಗಿಯೋಬ್ಬರು ಆಕೆಯನ್ನು ಮದುವೆಯಾಗಲು ಬಯಸಿದ್ದರು. ಅದನ್ನು ಆಕ್ಷೇಪಿಸಿ ರಮೇಶ್ ಆಕೆಗೆ ಹಿಂಸೆ ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದು ಬಂದಾಗ ಅವರನ್ನು ಬೈದಿದ್ದೆ. ಆ ಸಂದರ್ಭ ನನ್ನೊಂದಿಗೆ ಸಿಕ್ಕಾಪಟ್ಟೆ ಸಿಡುಕಿದ್ದ ಅವರು ಅವಳ ಮದುವೆ ವಿಚಾರದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಎಲ್ಲರನ್ನೂ ಕಳೆದುಕೊಂಡೆ: ಕೊಲೆ ಮಾಡುವಷ್ಟು ಕೆಟ್ಟ ಮನಸ್ಸು ಅವರದ್ದು ಎಂಬುದನ್ನು ಕಲ್ಪಿಸಿಕೊಳ್ಳದೆ ನಂಬಿದ ನಾನು ಇದೀಗ ಏನೂ ಅರಿಯದ ನನ್ನ ಮಕ್ಕಳನ್ನು, ತಾಯಿ, ತಂದೆ, ತಂಗಿ ಅಣ್ಣ ಎಲ್ಲರನ್ನೂ ಕಳೆದುಕೊಂಡೆ. ಸಹೋದರಿ ಇನ್ನೊಬ್ಬರನ್ನು ಮದುವೆಯಾಗಬಾರದು ಎಂಬುದೇ ಆಕೆಯ ಕೊಲೆಗೆ ಕಾರಣವಾಗಿತ್ತು.
ಈ ವೇಳೆ ಅಲ್ಲಿದ್ದ ತಾಯಿಯೂ ಪ್ರಾಣ ಕಳದುಕೊಳ್ಳಬೇಕಾಯಿತು. ಇದೇ ನೋವಿನಿಂದ ನನ್ನ ತಂದೆ ಮತ್ತು ಅಣ್ಣ ಆತ್ಮಹತ್ಯೆ ಮಾಡಿಕೊಂಡರು.
ಬೇಗ ಶಿಕ್ಷೆ ಜಾರಿಯಾಗಲಿ: ನಾನು ಕಳೆದುಕೊಂಡಿರುವ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ನಾನು ಈ ಕಾನೂನು ಹೋರಾಟ ನಡೆಸಿದ್ದೆ. ಇವೆಲ್ಲದರ ನಡುವೆ ಅವರು ಮಾಡಿದ ಕ್ಷಮಾರ್ಹವಲ್ಲದ ತಪ್ಪಿಗೆ ನ್ಯಾಯಾಲಯ ಸರಿಯಾದ ಶಿಕ್ಷೆ ನೀಡಿದೆ. ಈ ಶಿಕ್ಷೆ ಆದಷ್ಟು ಬೇಗ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.