ಪತ್ರಕರ್ತಗೆ ಹಲ್ಲೆ ಪ್ರಕರಣ: ಇತ್ತಂಡಗಳ ಹೊಡೆದಾಟ
ಬಂಟ್ವಾಳ: ಇತ್ತೀಚೆಗೆ ವಿಟ್ಲದ ಪತ್ರಕರ್ತರೊಬ್ಬರಿಗೆ ಹಲ್ಲೆ ನಡೆಸಿದ ವಿಚಾರವಾಗಿ ಎರಡು ತಂಡಗಳು ಹೊಡೆದಾಡಿಕೊಂಡ ಘಟನೆ ವಿಟ್ಲದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಸೋಮವಾರ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕಾಂತಡ್ಕ ನಿವಾಸಿ ವಿಟ್ಲದ ಉದ್ಯಮಿ ಹಸೈನಾರ್ ಹಾಗೂ ಇನ್ನೊಂದು ತಂಡದ ಕೊಡಂಗಾಯಿ ಸಾಧಿಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳು ವಿಟ್ಲ ಹಾಗೂ ಪುತ್ತೂರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಸಾಧಿಕ್, ಸಿದ್ದಿಕ್ ಹಾಗೂ ಇತರರ ತಂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಇರುವ ಹಸೈನಾರ್ ಅವರ ಕಚೇರಿಗೆ ನುಗ್ಗಿ ಪತ್ರಕರ್ತ ವಿ.ಟಿ ಪ್ರಸಾದ್‌ಗೆ ಸಹಾಯ ಮಾಡಬಾರದು ಎಂದು ಗದರಿಸಿ ಬಳಿಕ ಇರಿದು ಗಾಯಗೊಳಿಸಿ, ಕಚೇರಿಯ ಗ್ಲಾಸ್ ಪುಡಿಗಟ್ಟಿದ್ದಾರೆ ಎಂದು ಹಸೈನಾರ್ ಆರೋಪಿಸಿದ್ದಾರೆ.
ಪ್ರತಿದೂರು: 'ನನಗೆ ನೀನು ಹಣ ನೀಡಬೇಕು, ಇಲ್ಲವಾದರೆ ಪತ್ರಕರ್ತ ವಿ.ಟಿ ಪ್ರಸಾದ್‌ಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಿನ್ನನ್ನು ಕೂಡಾ ಫಿಕ್ಸ್ ಮಾಡುತ್ತೇನೆ' ಎಂದು ಹಸೈನಾರ್ ಹೇಳಿದ್ದು, ಈ ಬಗ್ಗೆ ವಿಚಾರಿಸಲು ತಾನು ಅವರ ಕಚೇರಿಗೆ ಹೋದಾಗ ಹಸೈನಾರ್ ಹಾಗೂ ಆತನ ತಂಡ ರಾಡ್ ಹಾಗೂ ಗ್ಲಾಸ್‌ನಿಂದ ಹಲ್ಲೆ ನಡೆಸಿದೆ ಎಂದು ಸಾಧಿಕ್ ಆರೋಪಿಸಿದ್ದಾನೆ. ವಿಟ್ಲ ಪೊಲೀಸರು ದೂರುಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.