ಶಿರಾಡಿ ಘಾಟಿ ರಸ್ತೆ ದುರಸ್ತಿಗೆ 94 ಕೋಟಿ
ಮಂಗಳೂರು: ಶಿರಾಡಿ ಘಾಟಿ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರ ರು. 94 ಕೋಟಿ ಮಂಜೂರು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಅನುದಾನ ಮಂಜೂರು ಮಾಡಿದ್ದಾರೆ. ಘಾಟಿ ರಸ್ತೆಯಲ್ಲಿ ಅಗತ್ಯ ಇದ್ದೆಡೆ ಕಾಂಕ್ರಿಟ್ ಹಾಗೂ ಉಳಿದೆಡೆ ಡಾಮರಿಕರಣ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿರಾಡಿಯಲ್ಲಿ ಹೆದ್ದಾರಿ ಸುರಂಗ ಮಾರ್ಗಕ್ಕೆ ಪರಿಸರ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ. ಸುರಂಗ ಮಾರ್ಗ ನಿರ್ಮಾಣದಿಂದ ರಸ್ತೆ ಅವ್ಯವಸ್ಥೆ ಸಮಸ್ಯೆ ತಪ್ಪಲಿದೆ ಎಂದರು.
ಸುರತ್ಕಲ್ನಿಂದ ಬಿ.ಸಿ.ರೋಡ್ ವರೆಗೆ ಹೆದ್ದಾರಿ ಸರ್ವಿಸ್ ರಸ್ತೆಗಳ ದುರಸ್ತಿಗೆ 22 ಕೋಟಿ ಮಂಜೂರಾಗಿದೆ. ಕೇಂದ್ರ ರಸ್ತೆ ನಿಧಿಯಡಿ ರಾಜ್ಯಕ್ಕೆ ಆಸ್ಕರ್ ಫರ್ನಾಂಡಿಸ್ 1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಎರಡನೇ ಹಂತದಲ್ಲಿ 800 ಕೋಟಿ ಪ್ಯಾಕೇಜ್ ಬಿಡುಗಡೆಯಾಗಿದೆ. ಕರಾವಳಿ ಜಿಲ್ಲೆಗಳಿಗೆ ಸಿಂಹ ಪಾಲು. 300 ಕೋಟಿ ದೊರೆಯಲಿದೆ.
ಆನೆ ಆವಾಸ: ಕೃಷಿಗೆ ಆನೆಗಳ ದಾಳಿ ಮಾಡುವುದನ್ನು ತಪ್ಪಿಸಲು ಆನೆಗಳ ಆವಾಸ ರಚಿಸುವ ಚಿಂತನೆ ಇದೆ. ಈಗಾಗಲೇ ಹಾಸನದಲ್ಲಿ ಕೃಷಿಕರು 2,500 ಹೆಕ್ಟೇರ್ ಭೂಮಿ ನೀಡಲು ಮುಂದೆ ಬಂದಿದ್ದಾರೆ. 13 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆನೆ ಆವಾಸ ನಿರ್ಮಿಸಲಾಗುವುದು. ರಕ್ಷಿತಾರಣ್ಯ ಸುತ್ತ ಕಂದಕ ತೋಡುವ ಪ್ರಸ್ತಾಪವೂ ಇದೆ. ನಾರಗಹೊಳೆ ರಕ್ಷಿತಾರಣ್ಯದಲ್ಲಿ ಈಗಾಗಲೇ 70 ಕಿ.ಮೀ. ಕಂದಕ ತೋಡಿದ್ದು, 40 ಕಿ.ಮೀ. ಕಂದಕ ತೋಡಲು ಬಾಕಿ ಇದೆ ಎಂದರು.
ಗೋಷ್ಠಿಯಲ್ಲಿ ಸಚಿವ ಯು.ಟಿ.ಖಾದರ್, ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಇದ್ದರು.