ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ವಾತಂತ್ರ್ಯ ಪೂರ್ವ ಕಾಲದ ಬದುಕಿನ ಕೈಗನ್ನಡಿ

Lingaraj Badiger
Updated On : 10 Dec 2013, 12:14 pm

ಕಾಂತಾವರ: ಸ್ವಾತಂತ್ರ್ಯ ಪೂರ್ವ ಕಾಲದ ವಸಾಹತುಶಾಹಿ ಆಡಳಿತ ಪರಿಣಾಮ ಭಾರತೀಯ ಸಮಾಜದ ಮೇಲೆ ಗಾಢವಾಗಿ ಬೀರಿದ್ದು, ಆ ಕಾಲದ ಬದುಕಿನ ಕೈಗನ್ನಡಿಯಾಗಿ ಮೂಡಿಬಂದಿರುವುದೇ ಸಂತುಬಾಯಿ ನೀಲಗಾರ ಅವರ 'ಸದ್ಗುಣಿ ಕೃಷ್ಣಬಾಯಿ' ಕಾದಂಬರಿ ಎಂಬುದಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಧರ್ ಎಚ್.ಜಿ. ತಿಳಿಸಿದರು.
ಅವರು ಕಾಂತಾವರ ಕನ್ನಡ ಸಂಘದ ನಮ್ಮ ಕನ್ನಡ ನಮ್ಮದು ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಭಾನುವಾರ ಸಂತುಬಾಯಿ ನೀಲಗಾರ ಧಾರವಾಡ ಅವರ 'ಸದ್ಗುಣಿ ಕೃಷ್ಣಬಾಯಿ' ಕಾದಂಬರಿ ಕುರಿತು ಮಾತನಾಡಿದರು.
ಶತಮಾನದ ಹಿಂದಿನ ಸ್ತ್ರೀಯರ ಬದುಕು ಆಧುನಿಕತೆಗೆ ಮುಖಾಮುಖಿಯಾದಾಗ ಸಮಾಜ ಹೇಗೆ ಅದಕ್ಕೆ ಪ್ರತಿಕ್ರಿಯಿಸುತ್ತದೆ ಮತ್ತು ಪ್ರಗತಿಯ ನೆಲೆಗಳನ್ನು ಶೋಧಿಸುತ್ತಾ ಸಂಪ್ರದಾಯಿಕ ಬೇಲಿಗಳನ್ನು ಮೆಲ್ಲಗೆ ಮುರಿಯುತ್ತಾ ಸಾಗುವ ಪಾತ್ರಗಳನ್ನು ಈ ಕಾದಂಬರಿಯಲ್ಲಿ ಅನನ್ಯವಾಗಿ ಚಿತ್ರಿಸಲಾಗಿದೆ. ಕಾದಂಬರಿಯು ಸದ್ಗೃಹಿಣಿಯ ಲಕ್ಷಣ, ಸ್ತ್ರೀ ಶಿಕ್ಷಣದ ಮಹತ್ವ, ಪುರುಷನ ಸಹಭಾಗಿತ್ವವನ್ನು ವಿವರಿಸುತ್ತಾ ಇವೆಲ್ಲವೂ ಒಟ್ಟಿನಲ್ಲಿ ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಹೇಗೆ ಪೂರಕವಾಗುತ್ತವೆ ಎಂಬುದನ್ನು ಚಿತ್ರಿಸುತ್ತದೆ ಎಂದು ಶ್ರೀಧರ್ ಎಚ್.ಜಿ. ವಿವರಿಸಿದರು.
ಚಾರಿತ್ರಿಕವಾಗಿಯೂ ಸಂತುಬಾಯಿಯವರು ಕನ್ನಡ ಮೊತ್ತಮೊದಲ ಕಾದಂಬರಿಗಾರ್ತಿಯಾಗಿದ್ದಾರೆ. ಧಾರವಾಡದ ವಾಗ್ಭೂಷಣ ಗ್ರಂಥಮಾಲೆಯ 45ನೇ ಕೃತಿಯಾಗಿ 1908ರಲ್ಲಿ ಪ್ರಕಟಗೊಂಡ ಅವರ ಕಾದಂಬರಿ ಸ್ತ್ರೀ ಶಿಕ್ಷಣದ ಒಲವು ಹಾಗೂ ಮಹಿಳಾ ಪರವಾದ ಧ್ವನಿಯೊಂದಿಗೆ ಮೂಢನಂಬಿಕೆಯ ಆವರಣವನ್ನು ನಿಧಾನವಾಗಿ ಒಡೆಯುತ್ತಾ ಪ್ರಗತಿಪರ ಚಿಂತನೆಯೊಂದಿಗೆ ಹೊಸತನ್ನು ಹೇಗೆ ಕಟ್ಟಬಹುದು ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಹೆಣೆಯುವ ಕಾದಂಬರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು. ನುಡಿನಮನದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಇದ್ದರು. ಬಾಬು ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ. ಮೊಗಸಾಲೆ ಸ್ವಾಗತಿಸಿ, ನಿಟ್ಟೆ ಮಂಜುನಾಥ ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement