ಹೊಳೆಯಲ್ಲಿ ಸಿಕ್ಕಿದ ಮೃತದೇಹ ಗುರುತು ಪತ್ತೆ
ಉಪ್ಪಿನಂಗಡಿ: ಕಡಬ ಠಾಣೆ ವ್ಯಾಪ್ತಿಯ ಕೊಡಿಂಬಾಳ ಗ್ರಾಮದ ಮೂರಾಜೆ ಪಟ್ನ ಎಂಬಲ್ಲಿ ಕುಮಾರಾಧಾರ ನದಿಯಲ್ಲಿ ಭಾನುವಾರ ಪತ್ತೆಯಾದ ಗಂಡಸಿನ ಶವ ಹಿರೆಬಂಡಾಡಿ ಗ್ರಾಮದ ಪೆಲತ್ತಡಿ ನೀಲಯ್ಯ ಗೌಡ (65) ಎಂಬವರದೆಂದು ಖಚಿತವಾಗಿದೆ. ಡಿ.5ರಂದು ಪೇಟೆ ಕಡೆಗೆ ಹೋಗಿ ಬರುತ್ತೇನೆಂದು ಹೋದ ನೀಲಯ್ಯ ಗೌಡ ನಾಪತ್ತೆಯಾಗಿರುವ ಬಗ್ಗೆ ಅವರ ಮಗ ಲೋಕೇಶ್ ಪೆಲತ್ತಡಿ ಉಪ್ಪಿನಂಗಡಿ ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. 8ರಂದು ನದಿಯಲ್ಲಿ ಪತ್ತೆಯಾದ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವದ ದಫನ ಕಾರ್ಯವನ್ನು ಪೊಲೀಸರು ನಿರ್ವಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಲೋಕೇಶ್ ಕಡಬ ಪೊಲೀಸರನ್ನು ಸಂಪರ್ಕಿಸಿ ಪತ್ತೆಯಾದ ಶವದ ಚಹರೆ ವಿಚಾರಿಸಿದಾಗ ಅದು ತನ್ನ ತಂದೆಯ ಶವವೆನ್ನುವುದು ಖಚಿತವಾಗಿ ಶವದ ವಿಧ್ಯುಕ್ತ ಸಂಸ್ಕಾರಕ್ಕಾಗಿ ಶವವನ್ನು ಧಪನ ಸ್ಥಳದಿಂದ ಮೇಲೆತ್ತಲಾಯಿತು. ನಾಕೂರುಕಯಾ ದಲ್ಲಿನ ದೇವರಿಗೆ ಹರಕೆ ಸಲ್ಲಿಸುವ ಪರಿಪಾಠವಿದ್ದ ನೀಲಯ್ಯ ಗೌಡ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತರಾದ ಸಾಧ್ಯತೆ ಅಂದಾಜಿಸಲಾಗಿದೆ.
ವ್ಯಕ್ತಿ ಅಸ್ಥಿಪಂಜರ ಪತ್ತೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿನ ಹೊಳೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹದ ಅಸ್ಥಿಪಂಜರ ಸೋಮವಾರ ಪತ್ತೆಯಾಗಿದೆ. ಸೋಮವಾರ ಹೊಳೆಯ ಮಧ್ಯದ ಬಂಡೆಕಲ್ಲಿನಲ್ಲಿ ಅಸ್ಥಿಪಂಜರವೊಂದು ಕಾಣಿಸುತ್ತಿದೆ ಎಂಬ ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ದೂರಿನ ಮೇರೆಗೆ ಪರಿಶೀಲಿಸಿದಾಗ ಸುಮಾರು 25 ದಿನಗಳ ಹಿಂದೆಯೇ ಮೃತಪಟ್ಟ ಸುಮಾರು 25 ವರ್ಷದ ಪ್ರಾಯದ ಗಂಡಸಿನ ಅಸ್ಥಿಪಂಜರ ಪತ್ತೆಯಾಯಿತು. ಅಸ್ಥಿಪಂಜರದಲ್ಲಿ ಪ್ಯಾಂಟ್ ಮಾತ್ರ ಇದ್ದು. ಹೊಳೆಯ ಮೇಲ್ಭಾಗದಲ್ಲಿ ಸಾವಿಗೀಡಾದ ವ್ಯಕ್ತಿಯ ಶವ ಹೊಳೆಯಲ್ಲಿ ಕೊಚ್ಚಿ ಬಂದು ಇಲ್ಲಿ ಬಂಡೆಕಲ್ಲಿನಲ್ಲಿ ಸಿಲುಕಿರುವ ಸಾಧ್ಯತೆ ಅಂದಾಜಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.