ಅಡಕೆ ನಿಷೇಧ ಪುನರ್ ಪರಿಶೀಲಿಸಲಿ: ಸಂಸದ ನಳಿನ್
ಮಂಗಳೂರು: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ಒಳಪಡಿಸಿತ್ತು. ಇದೀಗ ಕೇಂದ್ರ ಸರ್ಕಾರ ಮತ್ತೆ ಅಡಕೆ ಬೆಳೆಯುವ ರೈತರ ಮೇಲೆ ಪ್ರಹಾರ ನಡೆಸುತ್ತಿರುವುದನ್ನು ಸಂಸದ ನಳಿನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಆರೋಗ್ಯ ಇಲಾಖೆ ಅಡಕೆ ಬೆಳೆಗಾರರಿಗೆ ತೊಂದರೆಯಾಗುವ ವರದಿಯನ್ನು ಸಲ್ಲಿಸಿದ್ದು, ಇದನ್ನು ಪುನರ್ ಪರಿಶೀಲಿಸಬೇಕು, ಅಡಕೆಯಲ್ಲಿ ಯಾವೆಲ್ಲ ಅಂಶಗಳು ಇದೆ ಎಂಬುದನ್ನು ತಜ್ಞರ ಸಮಿತಿ ರಚಿಸಿ ವರದಿ ಸಲ್ಲಿಸಬೇಕಾಗಿ ಕೇಂದ್ರವನ್ನು ಆಗ್ರಹಿಸಿದ್ದಾರೆ.
ಅಡಕೆಯಲ್ಲಿ ಆರೋಗ್ಯಕ್ಕೆ ಹಾನಿಕರ ಅಂಶ ಇದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿ ಯಾವ ಆಧಾರದಲ್ಲಿ ಎಂದು ಗೊತ್ತಾಗಿಲ್ಲ. ತಂಬಾಕಿನಲ್ಲಿ ಹಾನಿಕಾರಕ ವರದಿ ಇದೆ ಎಂದರೆ ಒಪ್ಪಬಹುದು. ಇದು ಅಡಕೆ ಬೆಳೆಗಾರರನ್ನು ಬೀದಿಪಾಲು ಮಾಡುವ ಹುನ್ನಾರವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ಸ್ಪಷ್ಟೀಕರಣ ಕೇಳಲಾಗುವುದು.
ಇದರ ವಿರುದ್ಧ ಕ್ಯಾಂಪ್ಕೋ ಸಹಿತ ಜನಪರ ಸಂಘಟನೆಗಳ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದರು. ಅಲ್ಲದೆ ಲೋಕಸಭಾ ಅಧಿವೇಶನದಲ್ಲಿ ಚರ್ಚಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.