ಅಮೆರಿಕ ದಿನಾಚರಣೆ, ಮಾರ್ಟಿನ್ ಲೂಥರ್ ಡೇಗೆ ರಜೆ
ಮಂಗಳೂರು: ಭಾರತ ದೇಶದಲ್ಲಿ ವಾಸ, ಆದರೆ ಇವರಿಗೆ ಭಾರತ ಸ್ವಾತಂತ್ರೋತ್ಸವಕ್ಕೆ ರಜೆ ಇರೋದಿಲ್ಲ! ಕರ್ನಾಟಕದಲ್ಲಿ ಉದ್ಯೋಗ ಮಾಡುತ್ತಿದ್ದರೂ ಕನ್ನಡ ರಾಜ್ಯೋತ್ಸವಕ್ಕೆ ಇನ್ನಿತರ ಹಬ್ಬ ಹರಿದಿನಗಳಿಗೆ ಬೇಕೂ ಅಂದ್ರೂ ರಜೆ ಕೊಡೊದಿಲ್ಲ. ಆದರೆ ಮಾರ್ಟಿನ್ ಲೂಥರ್ ದಿನಾಚರಣೆಗೆ ಬೇಡಾ ಅಂದ್ರೂ ರಜೆ ನೀಡುತ್ತಾರೆ...!
ಇದು ಮಂಗಳೂರಿನ ಐಟಿ, ಬಿಟಿ ಔಟ್ಸೋರ್ಸ್ ಉದ್ಯೋಗಿಗಳ ಸ್ಥಿತಿ. ಇದು ಕೇವಲ ಮಂಗಳೂರು, ಬೆಂಗಳೂರು ಐಟಿ ಉದ್ಯೋಗಿಗಳ ಪರಿಸ್ಥಿತಿಯಲ್ಲ, ಬಹುತೇಕ ಇಡಿ ದೇಶದ ಔಟ್ಸೋರ್ಸ್ ಐಟಿ, ಬಿಟಿ ಸಂಸ್ಥೆಗಳ ಉದ್ಯೋಗಿಗಳ ಹಣೆ ಬರಹ.
ಐಟಿ ಬಿಟಿ ಸಂಸ್ಥೆಗೆ ಕಡಿಮೆ ಬೆಲೆಗೆ ನಮ್ಮ ಸರ್ಕಾರಗಳು ಭೂಮಿ ಕೊಡುತ್ತವೆ. ಆದರೆ ಭಾರತ ಭೂಮಿಗೆ ಮಾತ್ರ ಸಂಸ್ಥೆಗಳು ಗೌರವ ಕೊಡಲು ಅಸಾಧ್ಯ ಪರಿಸ್ಥಿತಿ. ಇಲ್ಲಿ ಸ್ವಂತ ಸೂರಿಗಾಗಿ ಸಾವಿರಾರು ಕುಟುಂಬಗಳು ಜಾಗಕ್ಕಾಗಿ ಅರ್ಜಿ ಹಾಕಿ ಕುಳಿತಿವೆ, ಅವರಿಗೆ ಭೂಮಿ ನೀಡಲು ಸರ್ಕಾರ ಬಳಿ ಜಾಗ ಇಲ್ಲ !
'ನಮಗೆ ಅಮೆರಿಕದಲ್ಲಿರುವ ಐಟಿ ಸಂಸ್ಥೆಗಳಿಗೆ ನೆರವು ನೀಡುವ ಉದ್ಯೋಗ. ಅಲ್ಲಿನ ಉದ್ಯೋಗಿಗಳು ಕೆಲಸ ಮಾಡಿದರೆ ಮಾತ್ರ ನಮಗೆ ಇಲ್ಲಿ ಉದ್ಯೋಗ ಸಿಗುತ್ತದೆ. ಆದ್ದರಿಂದ ಆ ದೇಶದ ರಜಾದಿನಗಳ ಪಟ್ಟಿ ಇಲ್ಲಿ ಕೆಲಸ ಮಾಡುವ ನಮಗೂ ಅನ್ವಯ ಆಗುತ್ತದೆ' ಎನ್ನುತ್ತಾರೆ ಕಂಕನಾಡಿ ಐಟಿ ಸಂಸ್ಥೆಯ ಪ್ರದೀಶ್ ಕುಮಾರ್.
ಮಂಗಳೂರಿನ ಐಟಿಬಿಟಿ ಸಂಸ್ಥೆಗಳಲ್ಲಿ ನ.1 ರಾಜ್ಯೋತ್ಸವಕ್ಕೆ ರಜೆ ನೀಡುವುದಿಲ್ಲ, ನ.21ರಂದು ಮಾರ್ಟಿನ್ ಲೂಥರ್ ಡೇಗೆ ರಜೆ ನೀಡುತ್ತಾರೆ, ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಗೆ ರಜೆ ನೀಡೋದಿಲ್ಲ ಅಮೆರಿಕ ಸ್ವಾತಂತ್ರ್ಯೋತ್ಸವಕ್ಕೆ ರಜೆ ನೀಡುತ್ತಾರೆ. ಕೆಲಸ ಇವತ್ತಿದ್ದರೆ ನಾಳೆ ಇದೆ ಎಂಬ ಗ್ಯಾರಂಟಿ ಇಲ್ಲ, ಗೆಟೌಟ್ ಅಂದ ತಕ್ಷಣ ಜಾಗ ಖಾಲಿ ಮಾಡಬೇಕು.
'ನಮಗೂ ರಜೆ ಸಿಗುತ್ತದೆ. ಯಾರು ಮೊದಲಿಗೆ ಅರ್ಜಿ ಹಾಕುತ್ತಾರೊ ಅವರಿಗೆ ಸಿಗುತ್ತದೆ. ನೂರು ಮಂದಿ ರಜೆ ಕೇಳಿದರೆ ಸಿಗುವುದು ಹತ್ತು ಮಂದಿಗೆ ಮಾತ್ರ' ಎನ್ನುತ್ತಾರೆ ರಾಜೇಶ್ ರಾವ್.
'ಹೊಸ ಸರ್ಕಾರ ಎಸ್ಮಾ ಬಂದ ಬಳಿಕ ನಮ್ಮ ಹಕ್ಕಿನ ಬಗ್ಗೆ ಪ್ರತಿಭಟನೆ, ಮುಷ್ಕರ ನಡೆಸಲೂ ಸಾಧ್ಯವಿಲ್ಲ. ದಮನಿತರ ನಾಯಕ ಎಂದು ಹೇಳಿಕೊಂಡವರೇ ನೌಕರರನ್ನು, ಕಾರ್ಮಿಕರನ್ನು ದಮನಿಸುವ ಕಾಯಿದೆ ಜಾರಿಗೆ ತಂದಿದ್ದಾರೆ' ಎಂದು ಸುಮಿತ್ರಾ ಆರೋಪಿಸುತ್ತಾರೆ.
ವಿದೇಶದವರು ಇಲ್ಲಿನ ಸಂಸ್ಥೆಗಳಿಗೆ ಹೊರಗುತ್ತಿಗೆ ಕೆಲಸ ನೀಡಿದರೆ, ಇಲ್ಲಿನ ಸಂಸ್ಥೆಗಳು ತಮ್ಮ ನೌಕರರ ನೆರವಿಗೆ ಬರುವ ಶುಚಿತ್ವ, ಭದ್ರತೆ ಮತ್ತು ಕ್ಯಾಬ್ (ವಾಹನ) ಸಿಬ್ಬಂದಿ ಕೆಲಸಕ್ಕೆ ಹೊರಗುತ್ತಿಗೆ ನೀಡುತ್ತಾರೆ.
ಶುಚಿತ್ವ, ಭದ್ರತೆ, ಕ್ಯಾಬ್ ಸಿಬ್ಬಂದಿ ಅಸ್ಪರ್ಶರು!
ಐಟಿಬಿಟಿಯವರಿಗೆ ಬೇಕಾದ ಹಾಗೆ ರಜೆ ಸಿಗದಿದ್ದರೂ ಬೇಕಾದಷ್ಟು ರಜೆ ಪಡೆಯಬಹುದು. ಆದರೆ ಶುಚಿತ್ವ ಕಾರ್ಮಿಕರಿಗೆ, ವಾಹನ ಚಾಲಕರಿಗೆ, ಭದ್ರತೆ ಸಿಬ್ಬಂದಿಗೆ ಬಹುತೇಕ ಕಂಪೆನಿಗಳು ರಜೆ ನೀಡುವ ಸಂಪ್ರದಾಯವನ್ನೇ ಇಟ್ಟುಕೊಂಡಿಲ್ಲ. ಪಿಎಫ್ ಇಲ್ಲವೇ ಇಲ್ಲ. ಏಕೆಂದರೆ ಅವರ ಲೆಕ್ಕದಲ್ಲಿ ಸಂಸ್ಥೆ ಉದ್ಯೋಗಿಗಳೇ ಅಲ್ಲ.
12ರಿಂದ 13 ಗಂಟೆ ಕೆಲಸ. 4-5 ಕಂಪೆನಿಗಳು ಹೊರಗುತ್ತಿಗೆ ವಹಿಸಿಕೊಂಡು ಕೆಲಸ ನೀಡಿದ್ದರೂ ಐಟಿಬಿಟಿ ಸಂಸ್ಥೆ ಮುಖ್ಯಸ್ಥರು ಗೆಟೌಟ್ ಅಂದರೆ ಇವರಿಗೆ ಕೆಲಸ ಇಲ್ಲ. ರಾತ್ರಿ ಓವರ್ಟೈಂ ಕೆಲಸ ಮಾಡಿಸುತ್ತಾರೆ. ಪ್ರತಿ ಕಾರ್ಮಿಕನಿಗೆ ಇದಕ್ಕೆ ಮಾಸಿಕ 5 ಸಾವಿರ ಹೆಚ್ಚುವರಿ ವೇತನ ಸಿಗುತ್ತದೆ. ಆದರೆ ಹೊರಗುತ್ತಿಗೆ ಪಡೆದ ಅಸಾಮಿ ಇದರಲ್ಲೂ ಹಣ ಮುಕ್ಕಿ ಕೇವಲ 2,750 ನೀಡುತ್ತಾರೆ' ಇದು ವಾಹನ ಚಾಲಕರ ಗೋಳು.
ಕ್ಯಾಬ್ನವರಿಗೆ ತಿಂಗಳಿಗೆ 5 ಸಾವಿರ ಕಿ.ಮೀ. ಸಿಗುವುದೇ ಕಷ್ಟ. ಇದಕ್ಕೆ 45ರಿಂದ 50 ಸಾವಿರ ಸಂಸ್ಥೆ ನೀಡುತ್ತದೆ. ಇದರಲ್ಲಿ 23 ಸಾವಿರ ಡೀಸೇಲ್ಗೆ, ಉಳಿದಂತೆ ಚಾಲಕರಿಗೆ ಮತ್ತು ವಾಹನ, ಟಯರ್ ಇತ್ಯಾದಿ ನಿರ್ವಹಣೆ ಮಾಡಬೇಕಾಗುತ್ತದೆ.
ಸಿಬ್ಬಂದಿಗೆ ಶೌಚಾಲಯ ಬಳಸುವಂತಿಲ್ಲ, ಬಟ್ಟೆ ಬದಲಾಯಿಸಲು ಅವಕಾಶ ಇಲ್ಲ. ಮಳೆಯೇ ಇರಲಿ, ಬಿಸಿಲೇ ಬರಲಿ ಚಾಲಕರು ಕಾರ್ನಿಂದ ಹೊರಬರುವಂತಿಲ್ಲ. ಕಾಲ್ಸೆಂಟರ್ ಉದ್ಯೋಗಿಗಳ ಜತೆ ಮಾತನಾಡಿದ್ದು ಗೊತ್ತಾದರೆ ಕೆಲಸ ಖೋತಾ.
ಬೆಳಗ್ಗೆ 3 ಗಂಟೆಯಿಂದ ಪಿಕಪ್ ಆರಂಭ, ಉದ್ಯೋಗಿಗಳು ವಿಳಂಬ ಮಾಡಿದರೂ ಕಾರು ಚಾಲಕರ ತಲೆಗೆ ಕಟ್ಟಲಾಗುತ್ತದೆ, ನಿಗದಿತ ವೇಳೆಗಿಂತ 5-10 ನಿಮಿಷ ವಿಳಂಬವಾದರೂ ಆ ಹೊತ್ತಿನ ಕಿ.ಮೀ. ಲೆಕ್ಕಕ್ಕೆ ಹಾಕುವುದಿಲ್ಲ, ಅದಕ್ಕೆ ಚಾಲಕನ ಕಿಸೆಯಿಂದ ಹಣ ಹೋಗುತ್ತದೆ. ಇದಕ್ಕೆ ಉದ್ಯೋಗಿಗಳ ಜತೆ ಕಿರಿಕ್ ಮಾತನಾಡಿದರೂ ಕೆಲಸ ಖೋತಾ.