ಕಾಡಾನೆ ದಾಳಿ: ಅಪಾರ ಬೆಳೆ ಹಾನಿ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಐನಕಿದು ಗ್ರಾಮದ ಕೆದಿಲ ಎಂಬಲ್ಲಿ ಕೃಷಿಕರ ತೋಟಗಳಿಗೆ ಕಳೆದೆರಡು ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತಿದ್ದು, ಅಪಾರ ಪ್ರಮಾಣದ ಕೃಷಿ ಬೆಳೆಗಳು ಹಾಗೂ ಕೃಷಿ ಉಪಕರಣಗಳನ್ನು ನಾಶ ಮಾಡಿದೆ.
ಸುಮಾರು ಆರು ತಿಂಗಳ ಹಿಂದೆ ಈ ಪರಿಸರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ತಲೆದೋರಿತ್ತು. ಬಳಿಕ ಸ್ವಲ್ಪ ಸಮಯಗಳಿಂದ ಕಾಡಾನೆ ಹಾವಳಿ ಇಳಿಮುಖಗೊಂಡಿತ್ತು. ಇದೀಗ ಮತ್ತೆ ಈ ಪರಿಸರದಲ್ಲಿ ಕಾಡಾನೆಗಳ ಸಮಸ್ಯೆ ತಲೆದೋರಿದ್ದು, ಇಲ್ಲಿಯ ಕೆದಿಲ ರಾಮಣ್ಣ ಗೌಡ ಎಂಬವರ ತೋಟಕ್ಕೆ ಮಂಗಳವಾರ ನುಗ್ಗಿದ ಕಾಡಾನೆಗಳ ಹಿಂಡು ಸುಮಾರು 400ಕ್ಕೂ ಮಿಕ್ಕಿ ಬಾಳೆ ಗಿಡಗಳನ್ನು ಗೊನೆ ಸಹಿತ ತಿಂದು ಕೆಡವಿ ಹಾಕಿ ನಾಶಮಾಡಿದೆ.
ಅಲ್ಲದೆ, ತೋಟಗಳಿಗೆ ನಿರಾವರಿಗೆಂದು ಅಳವಡಿಸಲಾದ ಕೃಷಿ ಸಲಕರಣೆಗಳನ್ನು ಕೂಡ ಮೆಟ್ಟಿ ಪುಡಿಗೈದು ಅಪಾರ ನಷ್ಟ ಉಂಟುಮಾಡಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಸುಬ್ರಹ್ಮಣ್ಯ ಚಂಪಾಷಷ್ಠಿ ದಿನ ರಾತ್ರಿ ಸುಬ್ರಹ್ಮಣ್ಯದಿಂದ ಐನಕಿದು ಮಾರ್ಗವಾಗಿ ಹರಿಹರ ಕಡೆಗೆ ವಾಹನಗಳಲ್ಲಿ ತೆರಳುತ್ತಿದ್ದ ಕೆಲವರಿಗೆ ದಾರಿ ಮಧ್ಯೆ ಕಾಡಾನೆ ಎದುರಾಗಿತ್ತು. ಕಾಡಾನೆಗಳ ಉಪಟಳದಿಂದ ಹಾನಿ ಗೀಡಾದ ಕೃಷಿ ಬೆಳೆಗಳಿಗೆ ಪರಿಹಾರ ನೀಡುವಂತೆ ಮತ್ತು ಕಾಡಾನೆ ದಾಳಿಯಿಂದ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕೃಷಿಕ ರವಿ ಕೆದಿಲ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.