ಮುಂದೂಡಿದ ಪಿಜಿ ಪರೀಕ್ಷೆ ನಾಳೆಯಿಂದ
ಮಂಗಳೂರು: ಮೈಸೂರಿನ ರಾಜವಂಶಸ್ಥ ನರಸಿಂಹರಾಜ ಒಡೆಯರ್ ನಿಧನದಿಂದ ಮುಂದೂಡಿದ್ದ ಮಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಡಿ.13ರಂದು ಕನ್ನಡ, ಇಂಗ್ಲೀಷ್, ಸಂಸ್ಕೃತ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಎಂಸಿಜೆ, ಎಂಎಸ್ಡಬ್ಲ್ಯೂ, ಎಂಬಿಎ, ಎಂಬಿಎ ಇಂಟರ್ ನ್ಯಾಷನಲ್ ಬಿಸಿನೆಸ್, ಎಂಕಾಂ, ಎಂಕಾಂ ಇನ್ಸೂರೆನ್ಸ್ ಮತ್ತು ಬ್ಯಾಂಕ್ ಮೆನೇಜ್ಮೆಂಟ್, ಎಂಎಚ್ಆರ್ಡಿ, ಎಂಸಿಎ, ಎಂಎಸ್ಸಿ ಮೆಟೀರಿಯಲ್ ಸೈನ್ಸ್, ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಗಣಿತಶಾಸ್ತ್ರ, ಮಾಸ್ಟರ್ ಆಫ್ ಲೈಬ್ರೆರಿ ಮತ್ತು ಇನ್ಫಾರ್ಮೇಷನ್ ಸೈನ್ಸ್. 16ರಂದು ಇಂಗ್ಲೀಷ್, ಎಂಐಬಿ, ಎಂಕಾಂ, 18ರಂದು ಎಂಎಸ್ಸಿ ಎಲೆಕ್ಟ್ರಾನಿಕ್ಸ್, 20ರಂದು ಎಂಎಸ್ಸಿ ಇಂಡಸ್ಟ್ರಿಯಲ್ ಕೆಮೆಸ್ಟ್ರಿ ಪರೀಕ್ಷೆ ನಡೆಯಲಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ.ಬದಿಯಡ್ಕ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರವೇ ಸಂತಾಪ
ಮಂಗಳೂರು: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದ.ಕ.ಜಿಲ್ಲಾ ಘಟಕ ಸಂತಾಪ ವ್ಯಕ್ತಪಡಿಸಿದೆ. ಸೌಮ್ಯ ಸ್ವಭಾವದ ಒಡೆಯರ್ ಯಾವುದೇ ವಿವಾದಕ್ಕೆ ಕಾರಣವಾಗದೆ ನಾಡಿನ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಆಟೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವೇಂದ್ರ ನಿಧನ
ಮಂಗಳೂರು: ನೀರುಮಾರ್ಗ ನಿವಾಸಿ ದೇವೇಂದ್ರ(56)ಹೃದಯಾಘಾತದಿಂದ ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಬಕಾರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಇವರು, ಪತ್ನಿ, ಓರ್ವ ಪುತ್ರ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.
ಸೇತುವೆ ಅಡಿಯಲ್ಲೇ ಮರಳು ಸಂಗ್ರಹ: 2 ಲಾರಿ ವಶ
ಬಂಟ್ವಾಳ: ಕಾನೂನು ಬಾಹಿರವಾಗಿ ಸೇತುವೆಯಡಿ ಜೆಸಿಬಿ ಮೂಲಕ ಮರಳು ಸಂಗ್ರಹ ಮಾಡುತ್ತಿದ್ದುದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಪತ್ತೆಹಚ್ಚಿದ್ದು, ಮರಳು ತುಂಬಿದ ಎರಡು ಲಾರಿಗಳನ್ನು ವಶಪಡಿಸಿ ದಂಡ ವಿಧಿಸಿದ್ದಾರೆ. ಇಲ್ಲಿಗೆ ಸಮೀಪದ ಮಣಿಹಳ್ಳ ಸೇತುವೆಯಡಿ ಜೆಸಿಬಿ ಬಳಸಿ ಮರಳು ಸಂಗ್ರಹಿಸಿ ಲಾರಿಯ ಮೂಲಕ ಅನಧಿಕೃತವಾಗಿ ಸಾಗಾಟಕ್ಕೆ ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಐ ನಾಗರಾಜ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಲಾರಿಗಳನ್ನು ವಶಪಡಿಸಿದರು. ಬಳಿಕ ದಂಡ ವಿಧಿಸಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಂದ ಮರಳನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿಗೆ ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಸೇತುವೆಯ ನೂರು ಮೀಟರ್ ವ್ಯಾಪ್ತಿಯಡಿಯಿಂದ ಜೆಸಿಬಿ ಬಳಸಿ ಮರಳು ಕೊರೆಯುವುದು ನಿಯಮಬಾಹಿರವಾಗಿದ್ದರೂ ಇಲಾಖೆಯೇ ಇದನ್ನು ಉಲ್ಲಂಘಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ರಾಜಕೀಯ ಕೃಪಾಕಟಾಕ್ಷದಿಂದ ಈ ಮರಳು ದಂಧೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.