ಹಲ್ಲೆ ಪ್ರಕರಣ: ನಾಲ್ಕು ದೂರು ದಾಖಲು
ಉಪ್ಪಿನಂಗಡಿ: ಇಲ್ಲಿನ ವಾಣಿಜ್ಯ ಮಳಿಗೆಯ ನಿರ್ಮಾಣ ಕಾರ್ಯ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಸಂತೋಷ್ ಕಾಮತ್ ಎಂಬವರು ನೀಡಿದ ದೂರಿನಲ್ಲಿ ರೋಹಿತಾಕ್ಷ, ಸಂದೀಪ್ ಶೆಟ್ಟಿ, ಬಾಲಕೃಷ್ಣ, ಪ್ರಸಾದ್ ಪಿ., ರವಿ ನಟ್ಟಿಬೈಲ್, ರಮೇಶ್, ಗಣೇಶ್, ಸಂತೋಷ್, ದೇಜಪ್ಪ ಮೂಲ್ಯ, ತಿರುಮಲ ತಿಮ್ಮಪ್ಪ ಎಂಬವರು ತನ್ನ ಕಾಮತ್ ಕೋಲ್ಡ್ ಹೌಸ್‌ಗೆ ನುಗ್ಗಿ ಅವ್ಯಾಚ ಶಬ್ದಗಳಿಂದ ಬೈಯ್ದು ದಾಂದಲೆ ನಡೆಸಿದ್ದಾರೆ ಎಂದು ಅಪಾದಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಪೈನಾನ್ಸ್ ಮಾಲೀಕ ವಿನಾಯಕ ಪೈ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮೇಲೆ ರೋಹಿತಾಕ್ಷ, ಬಾಲಕೃಷ್ಣ, ಸಂತೋಷ್ ಮತ್ತಿತರರು ತನ್ನ ಫೈನಾನ್ಸ್ ಕಚೇರಿಗೆ ನುಗ್ಗಿ, 'ಟಿಫಿನ್ ಹಾಲ್ ಕಟ್ಟಡಕ್ಕೆ ಸಂಬಂಧಿಸಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡುತ್ತಿದ್ದೀಯಾ' ಎಂದು ಆಕ್ಷೇಪಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ವಿನಾಯಕ ಪೈ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರೋಹಿತಾಕ್ಷ ಎಂಬವರೂ ಪೊಲೀಸರಿಗೆ ದೂರು ನೀಡಿದ್ದು, ತಾನು ತನ್ನ ಕಟ್ಟಡ ನಿರ್ಮಾಣ ಕೆಲಸಗಾರರಲ್ಲಿ ಮಾತನಾಡುತ್ತಿದ್ದಾಗ ಕಾಮತ್ ಕೋಲ್ಡ್ ಹೌಸ್ ಒಳಗಿನಿಂದ ವಿಡಿಯೊ ಶೂಟಿಂಗ್ ನಡೆಸುತ್ತಿದ್ದ ಕೃತ್ಯವನ್ನು ಆಕ್ಷೇಪಿಸಿದೆ. ಈ ಸಂದರ್ಭ ಚೂರಿಯೊಂದಿಗೆ ಬಂದ ಸಂದೀಪ್ ಕಾಮತ್ ತನ್ನ ಮೇಲೆ ಹಲ್ಲೆ ನಡೆಸಿದ್ದು, ಕೃತ್ಯದಲ್ಲಿ ರವಳನಾಥ್, ವಿನಾಯಕ ಪೈ, ಪ್ರಕಾಶ್ ಭಟ್, ಗಣೇಶ್ ಭಟ್, ವಿವೇಕಾನಂದ ಮೊದಲಾದವರು ಸೇರಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆಪಾದಿಸಿದ್ದಾರೆ.
ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಇನ್ನೊಂದು ತಂಡದ ಬಾಲಕೃಷ್ಣ ಎಂಬವರು ಪೊಲೀಸರಿಗೆ ದೂರು ನೀಡಿ, ತಾನು ಆರ್ಥಿಕ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ತನಗೆ ಹಣ ನೀಡುತ್ತೇನೆಂದು ಕರೆದ ವಿನಾಯಕ ಪೈ ಅವರ ಕಚೇರಿಗೆ ಹೋದಾಗ ಅಲ್ಲಿ ಹಣ ನೀಡಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದ್ದರು. ಮತ್ತೆ ಹಣ ಕೊಡುತ್ತೇನೆಂದು ಕರೆದು ಆತನ ಕೈಯಲ್ಲಿದ್ದ ಗಾಜಿನ ಚೂರಿಯಿಂದ ಹೊಡೆಯಲು ಮುಂದಾದರು. ಇದರಿಂದಾಗಿ ತನ್ನೊಂದಿಗಿದ್ದ ಸುರೇಶನಿಗೆ ತರಚಿದ ಗಾಯಗಳಾಗಿದೆ. ಜೊತೆಗೆ ಆತನೊಂದಿಗಿದ್ದ ರಮೇಶ್, ಗಣೇಶ್ ಭಟ್, ಸಂತೋಷ್ ಕಾಮತ್, ಸಂದೀಪ ಕಾಮತ್ ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ, ತನ್ನ ಕೊರಳಲ್ಲಿದ್ದ 4 ಪವನ್ ಚಿನ್ನದ ಸರ ಕಳೆದುಕೊಂಡಿರುವುದಾಗಿ ಅಪಾದಿಸಿದ್ದಾರೆ.