ಅಡುಗೆ ಅನಿಲ ಬೆಲೆ ಏರಿಕೆಗೆ ಬಳಕೆದಾರರ ಸಂಘ ಖಂಡನೆ
ಮಂಗಳೂರು: ಅಡುಗೆ ಅನಿಲಕ್ಕೆ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಬಳಕೆದಾರರ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕಿರುವ ಕ್ರಮವನ್ನು ಗ್ಯಾಸ್ ಮತ್ತು ಬಳಕೆದಾರರ ಸಂಘ ಖಂಡಿಸಿದೆ.
ಅನಿಲ ದೊರೆಗಳ ಮಾತಿನಂತೆ ಕುಣಿಯುತ್ತಿರುವ ಸರ್ಕಾರ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಮಿತಿಗೊಳಿಸಿ, ಸಬ್ಸಿಡಿ ಹಾಗೂ ಆಧಾರ್ ಕಾರ್ಡ್, ಬೆಲೆ ಏರಿಕೆ ಎಂಬ ಭೂತವನ್ನು ಜನರ ಮೇಲೆ ಹೊರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಧರ್ಮೇಂದ್ರ ಕೆ ಆರೋಪಿಸಿದ್ದಾರೆ. ಗೃಹ ಬಳಕೆ ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಇನ್ನೊಂದು ಬರೆ ಎಳೆದಿದೆ. ಕೇಂದ್ರ ಸರ್ಕಾರ ಜನವಿರೋಧಿ ನೀತಿ ಬದಲಾಯಿಸಿ ಜನರ ಭಾವನೆಗಳಿಗೆ ಸ್ಪಂಧಿಸಬೇಕು. ಇಲ್ಲವಾದಲ್ಲಿ 4 ರಾಜ್ಯಗಳ ಮತದಾರ ಕಸಪೊರಕೆ ಹಿಡಿದು ಶುಚಿಗೊಳಿಸಿದಂತೆ ಇಡೀ ದೇಶದಲ್ಲಿ ಈ ಸರ್ಕಾರವನ್ನು ನಿರ್ಮೂಲನಗೊಳಿಸುವ ಅನಿವಾರ್ಯತೆ ಬರಬಹುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.