ಇಂದು 'ಅಲ್ಟ್ರಾಟೆಕ್ ಅವಾರ್ಡ್-2013'
ಮಂಗಳೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮಂಗಳೂರು ಸೆಂಟ್ರಲ್ ವತಿಯಿಂದ ಡಿ. 13 ರಂದು ಸಂಜೆ 6ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಎಸಿಸಿಇ(ಐ)ಎಂಎಲ್ಆರ್ 'ಅಲ್ಟ್ರಾಟೆಕ್ ಅವಾರ್ಡ್-2013' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಮುಖ್ಯ ಎಂಜಿನಿಯರ್ ಕ್ಯಾ.ಆರ್.ಆರ್. ದೊಡ್ಡಿಹಾಲ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ಡಾ. ಮನಮೋಹನ್ ಕಲಗಲ್, ಅಸೋಸಿಯೇಶನ್ ರಾಷ್ಟ್ರೀಯ ಅಧ್ಯಕ್ಷ ಸೂರ್ಯಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು. ರಾಷ್ಟ್ರೀಯ ಕಾರ್ಯದರ್ಶಿ ಡಾ.ಎಂ.ಎಸ್. ಸುದರ್ಶನ್ ಉಪಾಧ್ಯಕ್ಷ ಸುರೇಶ್ ಕುಮಾರ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಉಪಾಧ್ಯಕ್ಷ ಡಾ.ವಿ. ರಾಮಚಂದ್ರ ಪಾಲ್ಗೊಳ್ಳುವರು ಎಂದು ಅಸೋಸಿಯೇಶನ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಪಿ. ರಂಗನಾಥ್ ಐತಾಳ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಉತ್ಕೃಷ್ಟ ಗುಣಮಟ್ಟದ ಕಾಂಕ್ರೀಟ್ ನಿರ್ಮಾಣದಲ್ಲಿ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದು 3 ವರ್ಷದೊಳಗಿನ ಕಟ್ಟಡಕ್ಕೆ ಮಾತ್ರ ಅನ್ವಯವಾಗುತ್ತದೆ. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಎಂಜಿನಿಯರ್ಗಳು, ಮಾಲಕರು, ವಾಸ್ತುಶಿಲ್ಪಿ ಹಾಗೂ ನಿರ್ಮಾಣಕಾರರ ಕಾರ್ಯಕ್ಷಮತೆ, ಗುಣಮಟ್ಟ ಹಾಗೂ ವಿನ್ಯಾಸಗಳನ್ನು ಉತ್ತೇಜಿಸುವ ಸಲುವಾಗಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅಸೋಸಿಯೇಶನ್ ಕಾರ್ಯದರ್ಶಿ ಅನಿಲ್ ಸೆಬಾಸ್ಟಿಯನ್ ಡಿಸೋಜ ಹೇಳಿದರು. ಗೋಷ್ಠಿಯಲ್ಲಿ ಪ್ರಾದೇಶಿಕ ಮುಖ್ಯಸ್ಥ ಪಿ. ನಾಗೇಶ್, ಸದಸ್ಯ ವಿಜಯವಿಷ್ಣು ಮಯ್ಯ ಇದ್ದರು.
ಬೈಕ್-ಜೀಪ್ ಡಿಕ್ಕಿ; ಇಬ್ಬರಿಗೆ ಗಾಯ
ಉಪ್ಪಿನಂಗಡಿ: ಬಂದಾರು ಗ್ರಾಮದ ಪದವು ಎಂಬಲ್ಲಿ ಬೈಕ್ ಮತ್ತು ಜೀಪಿನ ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡ ಬೈಕ್ ಸವಾರರಾದ ಗಣೇಶ್ ಮತ್ತು ನಾರಾಯಣ ನಾಯ್ಕ್ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.