ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಸಂದೇಶ ರವಾನೆ: ದೂರು
ಕೊಲ್ಲೂರು: ವಂಡ್ಸೆ ಗ್ರಾಮದ ಯುವತಿಯೊಬ್ಬರ ಹೆಸರಿನಲ್ಲಿ ದುಷ್ಕರ್ಮಿಗಳು ಸುಮಾರು 10 ದಿನಗಳಿಂದ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಬೇರೆಯವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಘಟನೆ ನಡೆದಿದೆ. ಸ್ವಾತಿ ಎಂಬವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ಸ್ನೇಹಿತರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆಕೆಯ ಹೆಸರನ್ನು ದುರುಪಯೋಗಿಸಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಮನನೊಂದಿರುವ ಸ್ವಾತಿ ಕೊಲ್ಲೂರು ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಂಕೆ ಕೊಂಬು ಮಾರಾಟ: ಇಬ್ಬರು ಆರೋಪಿಗಳ ಬಂಧನ
ಶಂಕರನಾರಾಯಣ: ಇಲ್ಲಿನ ಅಜ್ರಿ ಗ್ರಾಮದ ಅಜ್ರಿ ಬಸ್ ನಿಲ್ದಾಣದಲ್ಲಿ ಪೊಲೀಸರು ಬುಧವಾರ ರಾತ್ರಿ ಇಬ್ಬರು ವ್ಯಕ್ತಿಗಳಿಂದ ಜಿಂಕೆಯ ಕೊಂಬುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ರಾತ್ರಿ 10.30ಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಅವರಿಗೆ ಬಂದ ಖಚಿತ ಮಾಹಿತಿಯಂತೆ, ಆಜ್ರಿ ಬಸ್ ನಿಲ್ದಾಣ ಬಳಿ ನಿಂತಿದ್ದ ಸ್ಥಳೀಯ ನಿವಾಸಿಗಳಾದ ಕಿರಣ (20) ಮತ್ತು ಅರುಣ (17) ಎಂಬವರನ್ನು ವಿಚಾರಿಸಿದಾಗ, ಅವರು ಪ್ಲಾಸ್ಟಿಕ್ ಚೀಲದಲ್ಲಿ ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಪತ್ತೆಯಾಗಿದೆ. ಅವರನ್ನು ಬಂಧಿಸಿ, ಜಿಂಕೆಯ ಕೊಂಬುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.