ತುಳುನಾಡ ಬೀರೆರ್ ಸಮಾಲೋಚನೆ ಸಭೆ
ಬಂಟ್ವಾಳ: ಒಡಿಯೂರು ಕ್ಷೇತ್ರದ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ನಡೆಯುವ ತುಳುನಾಡ್ದ ಜಾತ್ರೆಯ ಅಂಗವಾಗಿ ಬಂಟ್ವಾಳ ತುಳು ತೇರ್ ಕೂಟದ ಆಶ್ರಯದಲ್ಲಿ ಡಿ.14ರಂದು ಪರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆಯಲಿರುವ ತುಳುನಾಡ್ದ ಬೀರೆರ್ ಕಲಾ ಪ್ರದರ್ಶನದ ಸಮಾಲೋಚನೆ ಸಭೆ ಶನಿವಾರ ಪರಂಗಿಪೇಟೆಯಲ್ಲಿ ನಡೆಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೆ. ಪೂಂಜ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ತಾರನಾಥ ಕೊಟ್ಟಾರಿ ತುಳುನಾಡ್ದ ಜಾತ್ರೆಯಲ್ಲಿ ತುಳುವರೆಲ್ಲರೂ ಸಂಘಟಿತರಾಗಿ ತುಳು ವೈಭವವನ್ನು ಸಾರುವಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.
ತುಳು ತೇರ್ ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜುವಿಟ್ಲ ಮಾತನಾಡಿದರು. ಆರ್ಥಿಕ ಸಮಿತಿ ಸಹ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್ ಗುತ್ತು ಮಾತನಾಡಿ, ತುಳುತೇರ್ ಒಯಿಪುಗ ಕಾರ್ಯಕ್ರಮದಲ್ಲಿ ಜ.5ರಂದು ಜಿಲ್ಲೆಯ 4 ತಾಲೂಕುಗಳಿಂದ ಬರುವ ತುಳು ಅಭಿಮಾನಿಗಳಿಗೆ ಫರಂಗಿಪೇಟೆಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಡಿ.14ರಂದು ನಡೆಯುವ ತುಳು ಬೀರೆರ್ ಸಾಂಸ್ಕೃತಿಕ ಸ್ಪರ್ಧೆಯ ಯಶಸ್ಸಿಗೆ ಶಕ್ತಿಮೀರಿ ಶ್ರಮಿಸಬೇಕು ಎಂದರು.
ಪ್ರಚಾರ ಸಮಿತಿ ಸಂಚಾಲಕ ಡಿ.ಎಂ. ಕುಲಾಲ್, ಸಾಂಸ್ಕೃತಿಕ ಸಮಿತಿ ಸಹ ಸಂಚಾಲಕ ಎ.ಗೋಪಾಲ ಅಂಚನ್ ವಿವಿಧ ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ಸದಾನಂದ ಆಳ್ವ ಕಂಪ, ಕೊಡ್ಮಾನ್ ದೇವದಾಸ್ ಶೆಟ್ಟಿ, ಮನೋಹರ ನಾಕ್, ದೇವೀಪ್ರಸಾದ್ ಇದ್ದರು.