ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಠಗಳಂತೆ ವ್ಯವಸ್ಥೆ ಕಲ್ಪಿಸುವ ಸಾಮರ್ಥ್ಯ ಸರ್ಕಾರಕ್ಕಿದೆಯಾ?: ಪೂಜಾರಿ

Vishwanath S
Updated On : 14 Dec 2013, 1:58 am

ಮಂಗಳೂರು: ಮಠಗಳನ್ನು ಮುಜರಾಯಿ ಇಲಾಖೆಯ ಅಧೀನಕ್ಕೆ ತರಬೇಕು ಎನ್ನುತ್ತಿರುವ ಸರ್ಕಾರಕ್ಕೆ ಅಲ್ಲಿರುವ ಮಕ್ಕಳ ವಿದ್ಯಾಭ್ಯಾಸ, ಜನರ ಸೇವೆಯನ್ನು ಸಮರ್ಪಕವಾಗಿ ನಡೆಸಿಕೊಡುವ ತಾಕತ್ತಿದೆಯಾ ಎಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಯಾವುದೇ ಕಾನೂನು, ನಿರ್ಧಾರ ಕೈಗೊಳ್ಳುವ ಅಧಿಕಾರ ಸಂವಿಧಾನಕ್ಕೂ ಇಲ್ಲ. ಈ ಮಧ್ಯೆ ಸರ್ಕಾರ ಮಠಗಳನ್ನು ಸ್ವಾಧೀನಪಡಿಸಲು ಹವಣಿಸುತ್ತಿರುವುದು ಸರಿಯಲ್ಲ. ಮಠಗಳಲ್ಲಿ ತಪ್ಪು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ, ಜನರ ಸೇವೆ ಮಾಡುತ್ತಿರುವ ಮಠಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ. ಇಂದಿನ ಅಧಿಕಾರ ವ್ಯವಸ್ಥೆಯಲ್ಲಿ ಮಠಗಳಲ್ಲಿ ನೀಡುತ್ತಿರುವ ಸೌಲಭ್ಯವನ್ನು ಸರ್ಕಾರಕ್ಕೆ ಮಾಡಿಕೊಡುವ ಧೈರ್ಯ ಇದೆಯಾ ಎಂದರು.
ಏಕೆ ರಗಳೆ ಸೃಷ್ಟಿಸ್ತೀರಿ?: ತುಮಕೂರು ಸಿದ್ಧಗಂಗಾ ಮಠ, ಮೈಸೂರಿನ ಸುತ್ತೂರು, ಶೃಂಗೇರಿ ಮಠ ಒಳ್ಳೆಯ ಸೇವೆ ನೀಡುತ್ತಿದೆ. ವಿಚಿತ್ರ ಸುತ್ತೋಲೆ, ವಿನಾಕಾರಣ ಕಾನೂನು ಸೃಷ್ಟಿಸುತ್ತಿರುವ ಸರ್ಕಾರಕ್ಕೆ ಏನಾಗಿದೆ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಕಷ್ಟು ಕೆಲಸಗಳಿರುವಾಗ ಇಂಥ ರಗಳೆ ಸೃಷ್ಟಿಸಿ ಗೊಂದಲ ಜನರನ್ನು ಗೊಂದಲಕ್ಕೀಡು ಮಾಡುತ್ತಿರುವು ಸರಿಯಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ಇಂಥ ವಿಚಾರಗಳನ್ನು ತಿಳಿಸಿಲ್ಲ. ಈ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದರೆ ಮುಖ್ಯಮಂತ್ರಿಯನ್ನು ನಿಧಾನವಾಗಿ ಮುಗಿಸಲು ಹೊಂಚು ಹಾಕಿದಂತೆ ಕಾಣುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅನೇಕ ಕಾನೂನಿದೆ. ಆದ್ದರಿಂದ ಸರ್ಕಾರ ಇಂಥ ವಿಚಾರಗಳಿಂದ ದೂರ ಇರುವುದು ಒಳ್ಳೆಯದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement