ಶಾಸ್ತ್ರೀಯ ಚೌಕಟ್ಟು ಮೀರದಿರಿ: ಮೋಹನ ಕುಮಾರ್
ಮಂಗಳೂರು: ಸತತ ಎರಡು ಗಂಟೆ ನೃತ್ಯ ಸಾಮರ್ಥ್ಯ ಮತ್ತು ನೃತ್ಯದ ಪೂರ್ಣ ಮಾಹಿತಿ ಇದ್ದರೆ ಮಾತ್ರ ರಂಗಪ್ರವೇಶ ಮಾಡಲು ಅರ್ಹ ಎಂದು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್ ಹೇಳಿದ್ದಾರೆ.
ತನ್ನ 35 ಮಂದಿ ಶಿಷ್ಯ ಬಳಗ ಶುಕ್ರವಾರ ನಗರದ ಪುರಭವನದಲ್ಲಿ ಏರ್ಪಡಿಸಿದ 'ಮೋಹನಾಭಿನಂದನಂ' ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದ.ಕ.ಜಿಲ್ಲೆಗೆ ಈಗ ಭರತನಾಟ್ಯ ಸ್ಥಾನ ಬಂದಿದೆ. ನಾನೀಗಲೂ ನೃತ್ಯದಲ್ಲಿ ವಿದ್ಯಾರ್ಥಿಯೇ ಎಂದು ವಿನೀತರಾಗಿ ನುಡಿದ ಅವರು, ಕಲೆ ಉಳಿಸಲು ಕೆಲವೊಮ್ಮೆ ನಿಷ್ಠುರವಾಗಿ ಮಾತನಾಡಿದ್ದೇನೆ. ನೃತ್ಯ ಶಾಸ್ತ್ರೀಯ ಚೌಕಟ್ಟಿನ ಹೊರಗ ಬರಬಾರದು, ಹಾಗೆಯೇ ಹಿಂದಿನದ್ದಕ್ಕೆ ಜೋತು ಬೀಳಬಾರದು. ತನಗೆ ಶಿಷ್ಯರೇ ಸಂಪತ್ತು. ಪಂದನೂರು ಶೈಲಿಯನ್ನು ಉಳಿಸಿ ಬೆಳೆಸಿ ಎಂದು ಆಶಿಸಿದರು.
ಈ ಸಂದರ್ಭ ಮೋಹನ ಕುಮಾರ್ ಮತ್ತು ಸಬಿತಾ ದಂಪತಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಬೆಳ್ಳಿ ಗ್ಲಾಸು, ಲೋಟ, ಜುಬ್ಬಾ, ಪೈರನ್ ನೀಡಿ ಗೌರವಿಸಲಾಯಿತು.
ಆರೋಗ್ಯ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಿರಿಯ ನೃತ್ಯಗುರು ಬೆಂಗಳೂರಿನ ಪ್ರೊ.ಎಂ.ಆರ್.ಕೃಷ್ಣಮೂರ್ತಿ, ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ವಿದ್ವಾನ್ ಪ್ರೇಮನಾಥ ಮಾಸ್ತರ್ ಅತಿಥಿಯಾಗಿ ಆಗಮಿಸಿದ್ದರು. ಮಾಜಿ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ಅಭಿನಂದನಾ ಭಾಷಣದಲ್ಲಿ, ಮೋಹನ ಕುಮಾರ್ ಅವರು ತತ್ವ, ಕಾರ್ಯ, ಧ್ಯೇಯ ನಿಷ್ಠ ಗುರುವಾಗಿದ್ದಾರೆ ಎಂದರು.
ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ಶ್ರೀಧರ ಹೊಳ್ಳ ವಂದಿಸಿದರು. ಬಳಿಕ ನೃತ್ಯ ಶಿಕ್ಷಕರ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.