ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಅಡಕೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ'

Lingaraj Badiger
Updated On : 16 Dec 2013, 11:46 am

ಬೆಂಗಳೂರುಅಡಕೆ ನಿಷೇಧ ಎಂಬ ಪದವನ್ನು ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಾಗಲಿ, ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳಲ್ಲಾಗಲಿ ಇದುವರೆಗೆ ಬಳಸಿಲ್ಲ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಮಲೆನಾಡು ಮಿತ್ರವೃಂದದ ಆಶ್ರಯದಲ್ಲಿ ನಡೆದ ಅಡಕೆ ನಿಷೇಧ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ. ಇದು ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
2004ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಯಾರಿಸಿದ ವರದಿಯಲ್ಲಿ ಅಡಕೆಯಲ್ಲಿ ಅರ್ಬುದಕಾರಕ ಲಕ್ಷಣಗಳಿವೆ ಎಂದು ಹೇಳಲಾಗಿದೆ. ಇದರ ಆಧಾರದ ಮೇಲೆ ಗುಟ್ಕಾ ನಿಷೇಧಿಸುವಂತೆ 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. 2011ರಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವರದಿಯಲ್ಲಿ ಹಸಿ ಅಡಿಕೆಯಲ್ಲಿ ರೋಗಕಾರಕ ಲಕ್ಷಣ ಇದೆ ಎಂದು ಹೇಳಲಾಗಿದ್ದು, ಸಂಸ್ಕರಿತ ಅಡಕೆಯಲ್ಲಿ ಇಲ್ಲ ಎನ್ನಲಾಗಿದೆ. ಜತೆಗೆ ಅಡಕೆ ನಿಷೇಧಿಸುವಂತೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದರು.
ಗುಟ್ಕಾ ನಿಷೇಧ ಹಿನ್ನೆಲೆಯಲ್ಲಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟ್ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ಲಿಖಿತ ಪ್ರಸ್ತಾಪ ಸಲ್ಲಿಸಿದ್ದಾರೆ. ಇದರಲ್ಲಿ ಅಡಕೆ ನಿಷೇಧಿಸಿ ಎಂಬ ಪದ ಬಳಕೆ ಮಾಡಿಲ್ಲ. ಅಧ್ಯಯನ ವರದಿ ಆಧಾರದ ಮೇಲೆ ಹಾನಿಕಾರಕ ಅಂಶಗಳು ಇರುವುದರಿಂದ ನ್ಯಾಯಾಲಯ ನಿಯಂತ್ರಣಕ್ಕೆ ಸೂಚನೆ ನೀಡಬಹುದು ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದರ ಜತೆಗೆ ಕೇಂದ್ರ ಆರೋಗ್ಯ ಇಲಾಖೆ ಸಚಿವ ಗುಲಾಂ ನಬಿ ಆಜಾದ್ ಅವರ ಜತೆಯೂ ಚರ್ಚೆ ನಡೆಸಿದ್ದೇನೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೂ ಆಜಾದ್ ಜತೆ ಮಾತನಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಅಡಕೆ ನಿಷೇಧದ ಬಗ್ಗೆ ಇದುವರೆಗೆ ಪ್ರಸ್ತಾಪಿಸಿಲ್ಲ ಎಂದರು.
ಆದಾಗಿಯೂ ಮಲೆನಾಡ ಭಾಗದ ರೈತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದನ್ನು ನಿವಾರಿಸಲು ಡಿಸೆಂಬರ್ 19ರಂದು ಸಂಧ್ಯಾ ಕಾಬ್ರಾ ಅವರನ್ನು ಭೇಟಿ ಮಾಡುತ್ತೇನೆ. ನಂತರ ರಾಜ್ಯದ ವಿಜ್ಞಾನಿಗಳ ಅಭಿಪ್ರಾಯವನ್ನು ಅವರಿಗೆ ಸಲ್ಲಿಸಲಾಗುವುದು. ಮತ್ತೊಂದು ಸುತ್ತು ಗುಲಾಂ ನಬಿ ಆಜಾದ್ ಅವರ ಜತೆ ಚರ್ಚೆ ನಡೆಸುತ್ತೇವೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮಧ್ಯಪ್ರವೇಶ ಮಾಡುತ್ತಾರೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಅಡಕೆ ನಿಷೇಧ ಸಾಧ್ಯವೇ ಇಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ. ಅಡಕೆಯಲ್ಲಿ ಔಷಧೀಯ ಗುಣ ಎನ್ನುವ ಸಂಶೋಧನೆಯ ಜತೆಗೆ, ಹಾನಿಕಾರಕ ಅಂಶಗಳಿವೆ ಎಂಬ ಅಧ್ಯಯನವೂ ಇದೆ. ಎರಡು ವಾದಗಳು ಇದ್ದರೂ ನಿಷೇಧ ಅಸಾಧ್ಯ ಎಂದರು.
ತಂಬಾಕಿನಲ್ಲಿ ಹಾನಿಕಾರಕ ಅಂಶಗಳಿವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಅದನ್ನು ನಿಷೇಧ  ಮಾಡುವುದು ಇನ್ನೂ ಸಾಧ್ಯವಾಗಿಲ್ಲ. ಅಡಕೆ ತೋಟಗಾರಿಕೆ ಬೆಳೆ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿದ್ದು. ಯಾವ ಬೆಳೆಯಬೇಕು ಎಂದು ನಿರ್ದೇಶನ ನೀಡುವುದಕ್ಕೆ ಬರುವುದಿಲ್ಲ ಎಂದರು.
ಶಾಸಕ ವೈ.ಎಸ್.ವಿ.ದತ್ತ, ಸಾಮಾಜಿಕ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ, ಸಂಶೋಧಕ ಡಾ. ಪ್ರಕಾಶ್ ಕಮ್ಮರಡಿ ಹಾಗೂ ಮಲೆನಾಡು ಭಾಗದ ವಿವಿಧ ಸಂಘಟನೆ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement