ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಗುಣಗಳಿಲ್ಲ: ಡಾ. ಹೆಗ್ಗಡೆ
ಬೆಳ್ತಂಗಡಿ: ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಗುಣಗಳಿಲ್ಲ. ಬದಲಾಗಿ ಔಷಧದ ಗುಣಗಳಿವೆ ಎಂಬುದನ್ನು ಸಂಶೋಧನೆಗೊಳಪಡಿಸಲು ಕ್ಯಾಂಪ್ಕೋ ಪ್ರೇರಿತ ಅಡಕೆ ಸಂಶೋಧನಾ ಮತ್ತು ಅಭಿವೃದ್ಧಿ (ಎಆರ್‌ಡಿಎಫ್) ಕೇಂದ್ರ ಸಿದ್ಧವಿದೆ ಎಂದು ಸಂಶೋಧನಾ ಕೇಂದ್ರದ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಭಾನುವಾರ ಮಡಂತ್ಯಾರಿನಲ್ಲಿ ನಡೆದ ಕೃಷಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಡಕೆಗೆ ಬೆಲೆ ಕಡಿಮೆ ಇದ್ದಾಗ ಹುಟ್ಟಿಕೊಂಡ ಸಂಶೋಧನಾ ಕೇಂದ್ರದಲ್ಲಿ ಮಾಡಿದ ಪರಿಶೋಧನೆಯ ಫಲವಾಗಿ ಅಡಕೆಯಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಮನಗಾಣಲಾಗಿದೆ. ಕ್ಯಾನ್ಸರ್‌ಗೆ ಅಡಕೆ ಕಾರಣವಲ್ಲ. ಗುಟ್ಕಾದಲ್ಲಿರುವ ರಾಸಾಯನಿಕ ಅಂಶವೇ ಕಾರಣ. ಆದರೆ, ಇದೀಗ ಅಡಕೆ ನಿಷೇಧದ ಬಗ್ಗೆ ಮಾತುಗಳು ಬಂದಿವೆ. ಹೀಗಾಗಿ ಸಂಶೋಧನಾ ಕೇಂದ್ರ, ಉಡುಪಿಯ ಆಯುರ್ವೇದ ಕಾಲೇಜಿನ ಜೊತೆಗೆ ಮತ್ತೊಮ್ಮೆ ಅದಕ್ಕೆ ಸರಿಯಾದ ಮೂಲ ಸಂಶೋಧನೆ ಮಾಡಲು ಸಿದ್ಧರಿದ್ದೇವೆ ಎಂದರು.
ಹೋರಾಟಕ್ಕೆ ಬೆಂಬಲ: ಬೆಳೆಗಾರರಿಗೆ ಆಪತ್ತು ತರುವ ಕಾನೂನು ತರಬಾರದು. ಅಡಕೆ ನಿಷೇಧ ಕುರಿತು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. ಭಯ ನಿವಾರಿಸಬೇಕು, ಅಡಕೆ ನಿಷೇಧ ವಿರುದ್ಧ ಹೋರಾಟಕ್ಕೆ ತನ್ನ ಬೆಂಬಲ ಇದೆ ಎಂದು ಹೆಗ್ಗಡೆ ಹೇಳಿದರು
ಎಲ್ಲೆಡೆ ಹೋರಾಟ: ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಡಕೆ ನಿಷೇಧದ ಅಫಿದವಿತ್ ಹಿಂದೆ ಪಡೆಯುವ ತನಕ ತಾನು ಸಂಸತ್‌ನ ಒಳಗೆ ಮತ್ತು ಹೊರಗೆ ಹೋರಾಟಕ್ಕೆ ಸಿದ್ಧ ಎಂದರು.
ಕೃಷಿ ಉತ್ಸವ ಸಮಿತಿ ಗೌರವಾಧ್ಯಕ್ಷ ಸ್ವಾಮಿ ಲಾರೆನ್ಸ್ ಮೋರಾಸ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಸ್ವಾಮಿ ಡೆನಿಸ್ ಮೋರಾಸ್ ಪ್ರಭು, ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಬೆಳ್ತಂಗಡಿ ಚರ್ಚ್ ಧರ್ಮಗುರು ಸ್ವಾಮಿ ಜೇಮ್ಸ್ ಡಿ ಸೋಜ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅರುಣ್ ಪುರ್ಟಾಡೋ, ಮಡಂತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ, ಎಪಿಎಂಸಿ ಅಧ್ಯಕ್ಷ ಭರತ್ ಕುಮಾರ್, ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಚಾರ್ಯ ಅಲೆಕ್ಸ್ ಐವನ್ ಸಿಕ್ವೆರಾ, ಮಡಂತ್ಯಾರು ಕೆಥೋಲಿಕ್ ಸಭಾ ಅಧ್ಯಕ್ಷ ಗ್ರೆಗರಿ ಸೇರಾ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್ ಇದ್ದರು.
ಕೃಷಿಕರಿಗೆ ಸನ್ಮಾನ: ಕೃಷಿಕರಾದ ರಾಮಣ್ಣ ನಾಯ್ಕ ಮಂಜಲೊಟ್ಟು, ಶೈಲೇಶ್ ಕುಮಾರ್ ಕುಕ್ಕಳ, ದರ್ಣಪ್ಪ ಗೌಡ ಮಚ್ಚಿನ, ಆನಂದ ಮೂಲ್ಯ ಮಾಲಾಡಿ, ನಾಣ್ಯಪ್ಪ ಪೂಜಾರಿ ಕುವೆಟ್ಟು, ವಸಂತ ನಾಯಕ್ ಪಾರೆಂಕಿ, ರಾಮಣ್ಣ ತಣ್ಣೀರುಪಂತ, ಹೈನೋದ್ಯಮಿ ಜೆಸಿಂತಾ ರೋಡ್ರಿಗಸ್ ಕುವೆಟ್ಟು ಇವರನ್ನು ಡಾ. ಹೆಗ್ಗಡೆ ಸನ್ಮಾನಿಸಿದರು.
ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮೊಗೆರೊಡಿ ಸ್ವಾಗತಿಸಿದರು. ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜೈನ್ ವರದಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಧರಣೇಂದ್ರ ಕುಮಾರ್ ಹಾಗೂ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ನಿರ್ವಹಿಸಿದರು.