'ಬ್ರಹ್ಮಶ್ರೀ ನಾರಾಯಣ ಗುರು' ತುಳು ಸಿನಿಮಾ ಚಿತ್ರೀಕರಣ ಚಾಲನೆ
ಮೂಲ್ಕಿ: ತುಂಗಭದ್ರ ಫಿಲ್ಮ್ಸ್ ಲಾಂಛನದಡಿ ಸಿದ್ದಾರ್ಥ ಅಲಿಯಾಸ್ ರಾಜಶೇಖರ್ ಕೋಟ್ಯಾನ್ ನಿರ್ಮಿಸಿ ನಿರ್ದೇಶಿಸಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ತುಳುಚಿತ್ರದ ಪ್ರಥಮ ದೃಶ್ಯ ಚಿತ್ರೀಕರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾನುವಾರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೊರಾಂಗಣದಲ್ಲಿ ಕ್ಲಾಪ್ ಮಾಡಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಚಿತ್ರಕ್ಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದು, ಸಂಸದ ಜಯಪ್ರಕಾಶ್ ಹೆಗ್ಡೆ ಕ್ಯಾಮೆರಾ ಚಾಲೂ ಮಾಡಿದರು.
ಕೇರಳದ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ದರ್ಶನ್ರನ್ನು ಸನ್ಮಾನಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ಮನೋಹರ್ ಶೆಟ್ಟಿ, ಬ್ರಹ್ಮಶ್ರೀ ನಾರಾಯಣ ಗುರು ಪಾತ್ರಧಾರಿ ಕಲಾವಿದ ವೆಂಕಟಾದ್ರಿ ಇದ್ದರು.
ಚಿತ್ರದ ನಿರ್ಮಾಪಕ, ನಿರ್ದೇಶಕ ರಾಜಶೇಖರ್ ಕೋಟ್ಯಾನ್ ಸ್ವಾಗತಿಸಿ, ಧನಂಜಯ ಶಾಂತಿ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಸುವರ್ಣ ವಂದಿಸಿದರು. ನರೇಶ್ ಸಸಿಹಿತ್ಲು ನಿರೂಪಿಸಿದರು.