ಭ್ರಷ್ಟ ಮನಸ್ಸು, ದಾರಿ ತಪ್ಪುವ ಜನರು: ಪ್ರೊ. ಸಿದ್ದರಾಮಯ್ಯ
ಮಂಗಳೂರು: ಸರ್ಕಾರದಿಂದಲೂ ಜನರ ಮನಸ್ಸು ಭ್ರಷ್ಟವಾಗುತ್ತಿದ್ದು, ಜನರ ಬದುಕು ದಾರಿ ತಪ್ಪುತ್ತಿದೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಅಭಿಮತ ವತಿಯಿಂದ ಶನಿವಾರ ನಗರದ ಕಲಾಂಗಣ್ನಲ್ಲಿ ಏರ್ಪಡಿಸಿದ 2 ದಿನಗಳ 'ಜನ ನುಡಿ' ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಆಡಳಿತದಲ್ಲೂ ತಲ್ಲಣವಿದ್ದು, ಬಡವರ ಪರ ಕಾರ್ಯಕ್ರಮ ಹಾಕಿಕೊಂಡರೆ ಬಂಡವಾಳಶಾಹಿಗಳು ಪ್ರತಿರೋಧ ಒಡ್ಡುತ್ತಾರೆ. ಇಲ್ಲಿ ಕೋಮುವಾದಿಗಳು ಕ್ರೌರ್ಯ ನಡೆಸುತ್ತಿದ್ದು, ಪಠ್ಯ ಪರಿಷ್ಕರಣೆಯಲ್ಲೂ ಮೂಲಭೂತವಾದಿಗಳು ಕೈತೂರಿಸುತ್ತಿವೆ. ಮಡೆಸ್ನಾನವನ್ನು ಸಮರ್ಥಿಸುವಂಥ ನುಡಿಚೋರರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಪ್ರಶಸ್ತಿಯನ್ನು ಬೆನ್ನಟ್ಟಬಾರದು, ಅದು ಅರಸಿ ಬಂದರೆ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ಸಾಹಿತಿಗಳು ಆತ್ಮಾವಲೋಕನ ಮಾಡಬೇಕು. ಹಿಪೋಕ್ರಸಿ ಸಾಹಿತಿಗಳು ಗುಣ ಆಗಬಾರದು. ಮೂಢನಂಬಿಕೆ ವಿಧೇಯಕ ವಿರೋಧಿಸುವವರಿಗೆ ತಿಳಿಹೇಳಬೇಕು ಎಂದು ಹೇಳಿದರು.
ಸತ್ಯವನ್ನು ಮುಂದಿಡಿ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹಿತಿ ಡಾ.ರಾಜೇಂದ್ರ ಚೆನ್ನಿ, ಸರ್ಕಾರ ಎಸ್ಮಾ ಕಾಯ್ದೆ ಜಾರಿ ಮಾಡಿದ್ದು, ಇದರಿಂದ ತಮ್ಮ ಹಕ್ಕುಗಳಿಗೆ ನೌಕರರು ಹೋರಾಟ ನಡೆಸುವಂತಿಲ್ಲ. ಇದರ ವಿರುದ್ಧ ನೌಕರರು, ನಾಗರಿಕರು ಸೊಲ್ಲೆತ್ತಿಲ್ಲ. ಕೊಲೆ, ಹಿಂಸೆ, ಕೋಮುವಾದ ಮತ್ತೆ ತಲೆಎತ್ತಿದ್ದು, ಸಾಹಿತ್ಯ ಮೌಲ್ಯ ಕಳೆದುಕೊಳ್ಳುತ್ತಿದೆ. ಆದ್ದರಿಂದ ದೇಶದಲ್ಲಿ ನಡೆಯುವ ಘಟನೆಗಳ ಸತ್ಯವನ್ನು ಸಾಹಿತ್ಯ ಜನರ ಮುಂದಿಡಬೇಕು ಎಂದು ಆಶಿಸಿದರು.
ನಾಡೋಜ ಸಾರಾ ಅಬೂಬಕ್ಕರ್ ಮಾತನಾಡಿ, ಲಕ್ಷಗಟ್ಟಲೆ ವ್ಯಯಿಸಿ ಸಾಹಿತ್ಯ ಕಾರ್ಯಕ್ರಮ ನಡೆಸುವವರು ಎಂಡೋಸಲ್ಫಾನ್ ಸಂತ್ರಸ್ತರ ಬದುಕಿಗೆ ಯಾಕೆ ನೆರವಾಗಬಾರದು ಎಂದರಲ್ಲದೆ, ಧಾರ್ಮಿಕ ಕೇಂದ್ರಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವ ಸರ್ಕಾರ ರೈತರ ನೆರವಿಗೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಅನುಪಮಾ ಪ್ರತಿಜ್ಞೆ: ಸಾಹಿತಿ ಡಾ.ಎಚ್.ಎಸ್. ಅನುಪಮಾ ಆಶಯ ಭಾಷಣ ಮಾಡಿ, ಸಾಹಿತ್ಯ ಸಮ್ಮೇಳನಗಳಿಗೆ ಇದು ಪರ್ಯಾಯ ಸಮ್ಮೇಳನ ಅಲ್ಲ. ಈ ಸಮ್ಮೇಳನ ಧರ್ಮ, ರಾಜಕಾರಣ, ಮೂಲಭೂತವಾದಕ್ಕೂ ಆಚೆಗೆ ವಿಸ್ತರಣೆಯಾಗಲಿದೆ. ಹಿರಿಯ ಸಾಹಿತಿಗಳೂ ದಾರಿ ತಪ್ಪಿದಾಗ ವಿವೇಕ ಮೂಡಿಸುವ ಕೆಲಸ ಆಗಬೇಕು ಎಂದರು.
ತಾನು ಇನ್ನು ಮುಂದೆ ಕೋಮುವಾದಿಗಳು ಅಥವಾ ಸರ್ಕಾರ ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ. ಅಂಥವರಿಂದ ಪ್ರಶಸ್ತಿಯನ್ನೂ ಸ್ವೀಕರಿಸುವುದಿಲ್ಲ. ಪ್ರಶಸ್ತಿಯಲ್ಲಿ ಬಂದಿರುವ ಮೊತ್ತವನ್ನು ಖಾಸಗಿ ಬಳಕೆಗೆ ಉಪಯೋಗಿಸುವುದಿಲ್ಲ ಎಂದು ಹೇಳಿದರು.
ರೈತ ಚಳುವಳಿಗಾರ ಕಡಿದಾಳು ಶಾಮಣ್ಣ, ಸಾಹಿತಿ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿದರು.