ಆಳ್ವಾಸ್ ವಿಶ್ವ ನುಡಿಸಿರಿಯಲ್ಲಿ ಹೊರನಾಡು, ಗಡಿನಾಡು ನುಡಿ ಸೇವಕರಿಗೆ ಅಭಿನಂದನೆ
ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ವಿರಾಸತ್- 2013ರ ರತ್ನಾಕರವರ್ಣಿ ವೇದಿಕೆಯಲ್ಲಿ 21ರಂದು ನಡೆಯುವ ಸಮಾರಂಭದಲ್ಲಿ ವಿದೇಶ, ಹೊರನಾಡು, ಗಡಿನಾಡುಗಳಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುತ್ತದೆ.
ಅಬುದಾಬಿಯ ನ್ಯೂ ಮೆಡಿಕಲ್ ಸೆಂಟರ್‌ನ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿಯವರ ಆರೋಗ್ಯ ಸೇವೆ, ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಗಾಗಿ, ಡಾ. ಸುಮಿಯೋ ಮೊರಿಜಿರಿ ಜಪಾನ್ ಅವರಿಗೆ ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಸಾಧನೆಗಾಗಿ, ಅಮೆರಿಕಾದ ಡಾ.ಎಚ್.ವೈ. ರಾಜಗೋಪಾಲ್ ಅವರಿಗೆ ಕನ್ನಡ ಸಾಹಿತ್ಯ ಸೇವೆ ಮತ್ತು ಸಂಸ್ಕೃತಿ ಪ್ರಸರಣಕ್ಕಾಗಿ ಮತ್ತು ಅಮೆರಿಕಾದ ಕನ್ನಡ ಕೂಟಗಳ ಆಗರ 'ಅಕ್ಕ' ಕನ್ನಡ ಸಂಘ ವಿದೇಶದಲ್ಲಿ ಸಮ್ಮೇಳನ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಸರಣಕ್ಕಾಗಿ ನಡೆಸುತ್ತಿರುವ ಕಾರ್ಯಚಟುವಟಿಕೆಗಾಗಿ 'ಅಕ್ಕ'ದ ಪೂರ್ವಾಧ್ಯಕ್ಷ ಅಮರನಾಥ್ ಗೌಡ ಯು.ಎಸ್.ಎ., ವಿದೇಶದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ನಳಿನ್ ಕುಮಾರ್ ಪರ್‌ಸಾದ್ ಲಂಡನ್ ಇಂಡೋಲಜಿ ಪೀಠ ವೂರ್ತ್ಸ್‌ಬುರ್ಗ್ ವಿಶ್ವವಿದ್ಯಾನಿಲಯ ಜರ್ಮನಿ ಅವರನ್ನು ಸನ್ಮಾನಿಸಲಾಗುತ್ತದೆ. ಹೊರನಾಡಿನ ಕನ್ನಡಿಗರಲ್ಲಿ ಮುಂಬೈ ವಿವಿಯಲ್ಲಿ ಸೇವೆ ಸಲ್ಲಿಸಿದ ಡಾ.ತಾಳ್ತಜೆ ವಸಂತ ಕುಮಾರ್, ದೆಹಲಿಯ ಡಾ.ಪುರುಷೋತ್ತಮ ಬಿಳಿಮಲೆ, ಮುಂಬೈಯ ಶಶಿಕಿರಣ್ ಶೆಟ್ಟಿ, ಡಾ. ವ್ಯಾಸರಾಯ ನಿಂಜೂರು, ಡಾ.ಜಿ.ಡಿ. ಜೋಶಿ, ಬಾ. ಸಾಮಗ ದೆಹಲಿ ಹಾಗೂ ಮುಂಬೈ ಕಲಾ ಜಗತ್ತು, ಪುಣೆ ಕನ್ನಡ ಸಂಘದ ಸೇವೆಯನ್ನು ಗುರುತಿಸಿ ಅಭಿನಂದಿಸಲಾಗುತ್ತದೆ.
ಗಡಿನಾಡಿನಲ್ಲಿದ್ದು ಕನ್ನಡ ಸೇವೆ ಸಲ್ಲಿಸುತ್ತಿರುವ ಭಾಲ್ಕಿ ಹಿರೇಮಠ್ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಮಲ್ಲಿಕಾರ್ಜುನ ಸೋಮಶೇಖರ ಮದ್ದೆ, ಸ್ನೇಹರಂಗ ಕಾಸರಗೋಡು ಇವರನ್ನು ಸನ್ಮಾನಿಸಲಾಗುವುದು.