ಇಂದಿನಿಂದ ಕೊಕ್ಕಡ ಕೋರಿ ಜಾತ್ರೆ
ಉಪ್ಪಿನಂಗಡಿ: ದೇವರು ಮತ್ತು ದೈವಗಳ ಸಂತೃಪ್ತಿಗಾಗಿ ನಡೆಯುವ ಕೊಕ್ಕಡದ ಕೋರಿ ಜಾತ್ರೆ 17ರಂದು ನಡೆಯಲಿದೆ. ಮನುಷ್ಯ ಹಾಗೂ ಜಾನುವಾರುಗಳನ್ನು ತೊಂದರೆ ಮುಕ್ತಗೊಳಿಸುವ ಸಲುವಾಗಿ ಆಚರಿಸಲಾಗುವ ಈ ಜಾತ್ರೆಯಲ್ಲಿ ಕೊಕ್ಕಡದ ಅಧಿದೇವತೆ ಶ್ರೀ ವೈದ್ಯನಾಥ ಮತ್ತು ವಿಷ್ಣುಮೂರ್ತಿ ದೇವರು ಮತ್ತು ಕ್ಷೇತ್ರದ ಪರಿವಾರ ದೈವಗಳನ್ನಾಧರಿಸಿ ಜಾತ್ರಾ ವಿಧಿವಿಧಾನಗಳು ನಡೆಯುತ್ತವೆ. ಕೋರಿಯಲ್ಲಿ ಗದ್ದೆಯನ್ನು ಮೊದಲು ಉಳುಮೆ ಮಾಡಿ ಹದ ಮಾಡಿಟ್ಟು ಕೊಳ್ಳಲಾಗುತ್ತದೆ. ಪ್ರತಿ ವರ್ಷ ಡಿ.16ರಂದೇ ನಡೆಯುವ ಕೊಕ್ಕಡ ಕೋರಿ ಜಾತ್ರೆ ಆ ದಿನಾಂಕದಂದು ಸೋಮವಾರ ಬಂದರೆ ಮರುದಿನ ಮಂಗಳವಾರ ನಡೆಯುವುದು ರೂಢಿ. ಈ ಕಾರಣಕ್ಕಾಗಿ ಈ ಬಾರಿಯೂ ಮಂಗಳವಾರ ಡಿ.17ರಂದು ಪ್ರಸಿದ್ಧ ಕೋರಿ ಜಾತ್ರೆ ನಡೆಯಲಿದೆ.