ಇಂದು ಕಾಣಿಯೂರು ಶ್ರೀಗೆ ಪೌರ ಸನ್ಮಾನ
ಪುತ್ತೂರು: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ತಾಲೂಕಿನ ಸಮಸ್ತ ನಾಗರಿಕರಿಂದ ಡಿ.17ರಂದು ಪೌರ ಸನ್ಮಾನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಂದನಾ ಕಾರ್ಯಕ್ರಮದ ಮೂಲಕ ಶ್ರೀ ದೇವಳದ ಪೂರ್ವದ್ವಾರದಲ್ಲಿ ಪೂರ್ಣಕುಂಭ ಸ್ವಾಗತ, ದೇವರ ದರ್ಶನದ ಬಳಿಕ ನಟರಾಜ ವೇದಿಕೆಗೆ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಗುವುದು. ಬಳಿಕ ಶ್ರೀಗಳಿಗೆ ತುಲಾಭಾರ, ಹೂವಿನ ಕಿರೀಟಧಾರಣೆ, ಕನಕಾಭಿಷೇಕ ಮತ್ತು ಪೌರ ಸನ್ಮಾನ ಮಾಡಲಾಗುವುದು. ನಂತರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ ಎಂದರು. ಶಾಸಕಿ ಶಕುಂತಳಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪುರಸಭೆ ಅಧ್ಯಕ್ಷೆ ವಾಣಿಶ್ರೀಧರ್, ತಾಪಂ ಅಧ್ಯಕ್ಷೆ ಶಶಿಪ್ರಭಾ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ. ರಾಮ್ ಭಟ್, ಜಿಪಂ ಮಾಜಿ ಅಧ್ಯಕ್ಷ ಸಂಕಪ್ಪ ರೈ, ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ನ್ಯಾಯವಾದಿ ಶಿವರಾಮ ಗೌಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ್ತಮೂಡಿತ್ತಾಯ ಉಪಸ್ಥಿತರಿರುವರು.ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ ಕೇವಳ, ಭಾಸ್ಕರ ಭಾರ್ಯ ಮತ್ತು ವಕೀಲ ಜಗನ್ನಿವಾಸ್ ರಾವ್ ಇದ್ದರು.