ಗುಂಪುಗಳ ನಡುವೆ ಮಾರಾಮಾರಿ: ದೂರು, ಪ್ರತಿದೂರು ದಾಖಲು
ಬೆಳ್ತಂಗಡಿ: ನಡ ಗ್ರಾಮ ಮಂಜೊಟ್ಟಿಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಭಾನುವಾರ ಸಂಜೆ ನಡೆದಿದೆ.
ತನ್ನ ಅಂಗಡಿಗೆ ನುಗ್ಗಿದ ಮಹೇಶ್ ಶೆಟ್ಟಿ, ಪ್ರವೀಣ್ ವಿ.ಜಿ., ಜಯಾನಂದ, ಪ್ರಕಾಶ್, ಪುರಂದರ, ವೆಂಕಪ್ಪ ಕೋಟ್ಯಾನ್, ಕೌಶಿಕ್, ವಸಂತ ಗೌಡ, ರಾಘವ ಕಾಶಿಬೆಟ್ಟು, ಗಣೇಶ್, ಪ್ರವೀಣ್ ಎಂಬವರು ತನ್ನ ಮೇಲೆ ಹಲ್ಲೆ ನಡೆಸಿದ್ದು ಚಿನ್ನದ ಸರ ಹಾಗೂ ಮೊಬೈಲನ್ನು ಅಪಹರಿಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಇತರರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಮಹೇಶ್ ಶೆಟ್ಟಿಯ ಪ್ರಚೋದನಕಾರಿ ಭಾಷಣದಿಂದ ಈ ಹಲ್ಲೆ ನಡೆದಿದೆ ಎಂದು ಬೆಳ್ತಂಗಡಿ ಪೊಲೀಸರಿಗೆ ಸ್ಥಳೀಯ ನಿವಾಸಿ ಶಾಮ್ ಸುಂದರ್ ದೂರು ನೀಡಿದ್ದಾರೆ. ಗಾಯಾಳುಗಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದೆಡೆ ಪುರಂದರ ಎಂಬವರು ತನ್ನ ಮೇಲೆ ಶ್ಯಾಮ್ ಸುಂದರ, ಸುಭಾಶ್ಚಂದ್ರ, ಪ್ರಕಾಶ್ ಶೆಟ್ಟಿ, ನವೀನ ನಡಬೆಟ್ಟು, ಮೋಹನ ಗೌಡ, ವಿಕ್ಟರ್ ಡಿ' ಕುನ್ಹ, ಹರೀಶ್ ಗೌಡ ಅವರು ಸೈಕಲ್ ಚೈನ್, ರೀಪು, ಬ್ಯಾಟು ಮತ್ತು ಕಲ್ಲು ಮುಂತಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಯೋಗಿಶ್ ಕುಮಾರ್, ಕೌಶಿಕ್ ಬಂಗೇರ ಅವರ ಮೇಲೂ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಾಳುಗಳು ಉಜಿರೆ ಖಾಸಗಿ ಆಸ್ಪತ್ರೆ ದಾಖಲಾಗಿದ್ದಾರೆ.
ಬೆಳ್ತಂಗಡಿ ಪೋಲಿಸರು ಎರಡೂ ಪ್ರಕರಣಗಳನ್ನು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಭಾನುವಾರ ಸೌಜನ್ಯಾ ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ನಡೆದ ಬಳಿಕ ಈ ಹೊಡೆದಾಟ ಪ್ರಕರಣ ನಡೆದಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ
ಬೆಳ್ತಂಗಡಿ: ನಡ ಗ್ರಾಮದ ಪಣೆಕಲಾ ನಿವಾಸಿ ಪ್ರವೀಣ್ ಪ್ರಕಾಶ್ ಲೋಬೊ (20) ಎಂಬವರು ತಮ್ಮ ಜಮೀನಿನ ಹಾಡಿಯಲ್ಲಿ ಭಾನುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಂದೆ ವಿನ್ಸೆಂಟ್ ಲೋಬೊ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.