ತಂತ್ರಾಂಶಕ್ಕೆ ಸೆಡ್ಡುಹೊಡೆದು ಆಸ್ತಿ ನೋಂದಣಿ!
ಮಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ನಮೂನೆ 9 ಮತ್ತು 11ರ ಗೊಂದಲ ಇದ್ದರೂ ತಾಲೂಕುಗಳಲ್ಲಿ ನಿಯಮ ಗಾಳಿಗೆತೂರಿ ನೋಂದಣಿ ಕಾರ್ಯ ನಡೆಯುತ್ತಿದೆ. ಇಷ್ಟೊಂದು ತೊಂದರೆ ಇರುವಾಗ ಹೇಗೆ ಆಸ್ತಿ ನೋಂದಣಿ ನಡೆಯುತ್ತಿದೆ ಎಂಬುದರ ಜಾಡು ಹಿಡಿದು ಹೋದ 'ಕನ್ನಡಪ್ರಭ'ದ ಗಮನಕ್ಕೆ ಬಂದದ್ದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಕೈಚಳಕ.
ನಮೂನೆ 9 ಮತ್ತು 11ಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿನಾಯ್ತಿ ನೀಡಿದ ಸರ್ಕಾರ ಈಗ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಆದೇಶವನ್ನು ಪೂರ್ತಿ ಮಾರ್ಪಾಟುಗೊಳಿಸಲು ಹೊರಟಿದೆ. ಅದಕ್ಕೂ ಮೊದಲೇ ಕಳೆದ ಮೂರು ತಿಂಗಳಿಂದ ಆಸ್ತಿ ನೋಂದಣಿ ಹಲವು ಕಡೆ ಭಾಗಶಃ ಸ್ಥಗಿತಗೊಂಡಿದೆ. ಆದರೂ ಆಸ್ತಿ ನೋಂದಣಿ ನಡೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ನೋಂದಣಿ ವಿಧಾನ ಹೇಗೆ?: ಆಸ್ತಿ ನೋಂದಣಿಯಾಗಬೇಕಾದರೆ ನಮೂನೆ 9 ಮತ್ತು 11 ಪ್ರತ್ಯೇಕವಾಗಿ ಸಲ್ಲಿಕೆಯಾಗಬೇಕು. ತೆರಿಗೆ ಮತ್ತು ತೆರಿಗೇತರ ಆಸ್ತಿಗಳ ವಿವರ ಕಡ್ಡಾಯವಾಗಿ ನೋಂದಣಿ ವೇಳೆ ಇರಬೇಕು. 2013 ಜೂ.14ರ ಮೊದಲಿನ ಜಾಗ ಕನ್ವರ್ಷನ್‌ಗೆ ಬರವಣಿಗೆ ನಕ್ಷೆಯ ಅಗತ್ಯ ಇರುವುದಿಲ್ಲ. ನಂತರದ ಆಸ್ತಿಗೆ ಲೇಔಟ್ ನಕ್ಷೆಯನ್ನು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯಿಂದ ದೃಢೀಕರಿಸಿ ಕೊಡಬೇಕು. ನಂತರ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು. ಪ್ರಸ್ತುತ ತಂತ್ರಾಂಶ ಬದಲಾವಣೆ ಮಾಡದೆ ಅಪ್‌ಲೋಡ್ ಆಗುತ್ತಿಲ್ಲ. ಹಾಗಾಗಿ ನಿಜವಾಗಿ ಆಸ್ತಿ ನೋಂದಣಿ ಈಗ ಸಾಧ್ಯವಿಲ್ಲ.
ತಂತ್ರಾಂಶದಲ್ಲಿ ಅಪ್‌ಲೋಡ್ ಆಗಬೇಕಾದರೆ 4 ಹಂತಗಳನ್ನು ಪೂರೈಸಬೇಕು. ಗ್ರಾಮ ಠಾಣೆ, ಬಡಾವಣೆ ನಕ್ಷೆ, ವಸತಿ ಯೋಜನೆಯಲ್ಲಿ ನಿವೇಶನ ಮಂಜೂರಾದ್ದು(ಹಕ್ಕು ಪತ್ರ ಸಿಕ್ಕಿದರೂ ಸಾಕು), ಕೈಗಾರಿಕಾ ಉದ್ದೇಶದ ಜಮೀನು ಹಾಗೂ ಫಾರಂ ಹೌಸ್(ತಹಸೀಲ್ದಾರ್ ದೃಢೀಕರಿಸಬೇಕು). ಇದರಲ್ಲಿ ಯಾವುದಾದರೂ ಒಂದು ಅಪ್‌ಲೋಡ್ ಆಗದಿದ್ದರೂ ಆಸ್ತಿ ನೋಂದಣಿ ಸಾಧ್ಯವಿಲ್ಲ. ಇದಕ್ಕೆ ಪಿಡಿಒಗಳು ಕಂಡುಹುಡುಕಿದ್ದು ತಮ್ಮದೇ ಸುಲಭ ತಂತ್ರ.
ತಂತ್ರಾಂಶಕ್ಕೆ ತಪ್ಪು ಮಾಹಿತಿ ದಾಖಲು: ಪಿಡಿಒ ಕೈಚಳಕ ತೋರಿಸುವುದು ಇಲ್ಲಿಯೇ. 5 ಹಂತಗಳಲ್ಲಿ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವಲ್ಲಿ ಪ್ರತ್ಯೇಕ ಪ್ರತ್ಯೇಕ ಮಾಹಿತಿಯನ್ನು ನೀಡಬೇಕು. ಆದರೆ ಕೆಲವು ಪಿಡಿಒಗಳು 4 ಹಂತಗಳಲ್ಲೂ ನಮೂನೆ 9 ಪತ್ರವನ್ನು ಅಪ್‌ಲೋಡ್ ಮಾಡುತ್ತಾರೆ. ತಂತ್ರಾಂಶಕ್ಕೆ ಬೇಕಾದ ಮಾಹಿತಿಯನ್ನು ನೀಡುವ ಬದಲು ಒಂದೇ ಮಾಹಿತಿಯನ್ನು ನಾಲ್ಕು ಕಡೆ ಅಪ್‌ಲೋಡ್ ಮಾಡಿದಾಗ ತಂತ್ರಾಂಶ ಅದನ್ನು ಸ್ವೀಕರಿಸುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮೂನೆ 9 ಇದೆಯೇ ಎಂದು ನೋಡುತ್ತಾರೆಯೇ ವಿನಃ ಯಾವುದನ್ನೆಲ್ಲ ಭರ್ತಿ ಮಾಡಿದ್ದಾರೆ ಎಂದು ಪರಿಶೀಲಿಸುವುದಿಲ್ಲ. ಇದನ್ನೇ ದುರುಪಯೋಗಪಡಿಸುವ ಪಿಡಿಒಗಳು ತಮಗಿಷ್ಟ ಬಂದಂತೆ ಆಸ್ತಿ ನೊಂದಣಿಗೆ ನೆರವಾಗುತ್ತಾರೆ. ಹೀಗೆ ನೋಂದಣಿ ಮಾಡಿದರೆ ಅಧಿಕೃತವೇ ಆಗುತ್ತದೆ. ಆದರೆ ದಾಖಲೆ ಪರಿಶೀಲಿಸಿದರೆ ಬೋಗಸ್ ಇರುತ್ತದೆ. ಅಡ್ಡಪರಿಶೀಲನೆ ಮಾಡಿದರೆ ತಪ್ಪು ಮಾಹಿತಿ ಅಪ್‌ಲೋಡ್ ಮಾಡಿರುವುದನ್ನು ಪತ್ತೆಹಚ್ಚಬಹುದು.
-ಆತ್ಮಭೂಷಣ್