ನೇತ್ರಾವತಿ ನದಿ ತಿರುವು ಯೋಜನೆ ಪರಿಣಾಮ ಕುರಿತು ಸರ್ಕಾರಕ್ಕೆ ವರದಿ; ಪ್ರೊ.ಗಾಡ್ಗೀಳ್ಗೆ ಸಮಿತಿ ಮನವಿ
ಉಪ್ಪಿನಂಗಡಿ: ಪಶ್ಚಿಮ ಘಟ್ಟ ರಕ್ಷಣೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ ಪ್ರೊ. ಮಾಧವ ಗಾಡ್ಗೀಳ್ ಮಂಗಳವಾರ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭ, ಉಪ್ಪಿನಂಗಡಿಯ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರೊ. ಗಾಡ್ಗೀಳ್ರನ್ನು ಭೇಟಿಯಾದರು.
ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ನೇತ್ರಾವತಿಯನ್ನು ತಿರುಗಿಸುವ ಯೋಜನೆ ಹಾಕಿಕೊಂಡಿದ್ದು, ಈ ಯೋಜನೆಯಿಂದ ಜಿಲ್ಲೆ ಬರಡಾಗುವ ಸಾಧ್ಯತೆ ಇದೆ. ಆದುದರಿಂದ ಯೋಜನೆಯನ್ನು ದಕ್ಷಿಣ ಕನ್ನಡದ ಜನತೆ ವಿರೋಧಿಸುತ್ತಿದ್ದು, ನೇತ್ರಾವತಿ ನದಿ ತಿರುವು ಯೋಜನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ, ಪ್ರೊ. ಗಾಡ್ಗೀಳ್ ಜೊತೆ ಸುದೀರ್ಘ ಚರ್ಚೆ ನಡೆಸಿ, ಯಾವುದೇ ಕಾರಣಕ್ಕೂ ನೇತ್ರಾವತಿಯನ್ನು ತಿರುಗಿಸಬಾರದೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವಂತೆ, ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನೇತ್ರಾವತಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಡಾ. ನಿರಂಜನ್ ರೈ, ಕೈಲಾರ್ ರಾಜಗೋಪಾಲ್ ಭಟ್, ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಡಾ.ಶ್ರೀಶ ಕುಮಾರ್ ಇದ್ದರು.