ಬಸವ ವಸತಿ, ಅಡಕೆ ನಿಷೇಧ ಬಗ್ಗೆ ತೀವ್ರ ಚರ್ಚೆ
ಮಂಗಳೂರು: ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಿಸುವಲ್ಲಿನ ತೊಂದರೆ ಹಾಗೂ ಅಡಕೆ ನಿಷೇಧ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಆರೋಗ್ಯ ಇಲಾಖೆ ಅಫಿದವಿತ್ ಸಲ್ಲಿಸಿದ ವಿಚಾರ ಗುರುವಾರ ನಡೆದ ದ.ಕ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ, ವಾದ, ವಿವಾದಕ್ಕೆ ಕಾರಣವಾಯಿತು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸಿದರು.
ಜಿಲ್ಲೆಯಲ್ಲಿ 3,183 ಬಸವ ವಸತಿಯಲ್ಲಿ ಮಂಜೂರಾದ ಮನೆ ಬ್ಲಾಕ್ ಆಗಿದೆ. ಹಾಗಾಗಿ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಪರಿಹಾರ ಎಂದು ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಪ್ರಶ್ನಿಸಿದರು.
ತಾಲೂಕುಗಳಲ್ಲಿ 3 ವರ್ಷದಿಂದ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ಬಾಕಿ ಉಳಿದವರಿಗೆ ಮತ್ತೆ ಅವಕಾಶ ಕಲ್ಪಿಸುವಂತೆ ಸದಸ್ಯ ಸಂತೋಷ್ ಕುಮಾರ್ ಆಗ್ರಹಿಸಿದರು. ಎಂಎಸ್ ಮಹಮ್ಮದ್ ಮಾತನಾಡಿ, ನೋಡೆಲ್ ಅಧಿಕಾರಿಗಳು ಇದ್ದರೂ ಸರಿಯಾಗಿ ತಾಲೂಕಿಗೆ ಭೇಟಿ ನೀಡುತ್ತಿಲ್ಲ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿ.ಪಂ. ಉಪ ಕಾರ್ಯದರ್ಶಿ ಉಮೇಶ್ ಉತ್ತರಿಸಿ, ರಾಜೀವ್‌ಗಾಂಧಿ ವಸತಿ ನಿಗಮದ ಸೂಚನೆಯನ್ನು ಪಾಲಿಸಿದರೆ ಲಾಕ್ ಆದ ಮನೆಗಳನ್ನು ತೆರವು ಮಾಡಲು ಸಾಧ್ಯವಿದೆ. ಅಂಥ ಮನೆಗಳನ್ನು ಪರಿಶೀಲಿಸಿ ಬ್ಲಾಕ್ ತೆರೆಯಲು ಪಿಡಿಒಗೆ ಸೂಚಿಸಲಾಗುವುದು ಎಂದು ಹೇಳಿದರು.
ಅಡಕೆ ನಿಷೇಧಿಸುವಂತೆ ಕೇಂದ್ರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿರುವ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಸಮರಕ್ಕೆ ಕಾರಣವಾಯಿತು.
ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಸ್ಪಷ್ಟನೆಯನ್ನು ಕಾಂಗ್ರೆಸ್ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಬಗ್ಗೆ ವಾದ ವಿವಾದ ನಡೆದು ಕೊನೆಯಲ್ಲಿ ಈ ಬಗ್ಗೆ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರುವ ನಿರ್ಣಯ ಮಾಡಲಾಯಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ತ್ವರಿತ ಅನುಷ್ಠಾನಗೊಳಿಸಬೇಕು. ಬೇಸಗೆಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುತ್ತದೆ ಎಂದು ಸದಸ್ಯ ಸಂತೋಷ್ ಕುಮಾರ್ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಎಂಜಿನಿಯರ್ ಸತ್ಯನಾರಾಯಣ, ಬಂಟ್ವಾಳದ 6 ಕಡೆಗಳಲ್ಲಿ ರು. 124 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗುತ್ತಿದೆ. ಅಲ್ಲದೆ ಇನ್ನೂ 14 ಕಡೆಗಳಿಗೆ ರು. 114 ಕೋಟಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರಾಜ್ಯ ಮಟ್ಟದ ಯೋಜನಾ ಸಮಿತಿ ಅನುಮೋದನೆ ಬಳಿಕ ಯೋಜನೆ ಕಾರ್ಯಗತವಾಗಲಿದೆ. ಯೋಜನೆ ಸಮಿತಿ ಸಭೆ ಶೀಘ್ರ ಕರೆಯುವಂತೆ ಕೋರಲಾಗುವುದು ಎಂದು ಹೇಳಿದರು.
ತೊಟ್ಟಿಲಗುರಿ ದುರಂತ ಬಳಿಕ ಜಿಲ್ಲೆಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ವಿಚಾರ ಚರ್ಚೆಗೆ ಬಂತು.
ಉಪಾಧ್ಯಕ್ಷ ಈಶ್ವರ್ ಕಟೀಲ್ ಮಾತನಾಡಿ, ಅನಧಿಕೃತ ವಾಣಿಜ್ಯ ಕಟ್ಟಡ ತೆರವುಗೊಳಿಸಲಿ, ಆದರೆ ವಾಸ್ತವ್ಯದ ಕಟ್ಟಡಗಳನ್ನು ತೆರವು ಮಾಡುವುದು ಬೇಡ ಎಂದರು. ಅದಕ್ಕೂ ಮೊದಲುದುರಂತದಲ್ಲಿ ಅಸುನೀಗಿದವರಿಗೆ ಪರಿಹಾರ ನೀಡುವಂತೆ ಸದಸ್ಯ ಜನಾರ್ದನ ಗೌಡ ಆಗ್ರಹಿಸಿದರು.
ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಕೀರ, ಆಶಾ ತಿಮ್ಮಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ವೇದಿಕೆಯಲ್ಲಿದ್ದರು.