ಸುದ್ದಿ ಸಂಕ್ಷೇಪ
ವ್ಯಕ್ತಿ ನಾಪತ್ತೆ
ಮಂಗಳೂರು: ಕೆನರಾ ಕಾಲೇಜಿನಲ್ಲಿ ಮ್ಯೆಕಾನಿಕಲ್ ಟೆಕ್ನಿಶನ್ ಆಗಿದ್ದ ಧರ್ಮರಾಜ್ ಡಿ. 11 ರಂದು ಕೆಲಸಕ್ಕೆ ತೆರಳಿದವರು, ನಾಪತ್ತೆಯಾಗಿದ್ದಾರೆ. ಇವರು ಕಪ್ಪು ಬಣ್ಣದ ಟೀ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ತುಳು ಮಾತನಾಡುತ್ತಾರೆ. ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ 0824-2220535 ಸಂಪರ್ಕಿಸಿ.
ಗುಜ್ಜಾಡಿಗೆ ಡಾ. ಹೆಗ್ಗಡೆ ಭೇಟಿ
ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಗಂಗೊಳ್ಳಿ ಸಮೀಪದ ಗುಜ್ಜಾಡಿಗೆ ಭೇಟಿ ನೀಡಿದರು. ಧಾರವಾಡದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಡಾ. ಹೆಗ್ಗಡೆಯವರು ಗುಜ್ಜಾಡಿಯಲ್ಲಿ ಗಣಪತಿ ಮೇಸ್ತ ಮತ್ತು ಸಹೋದರರು ಸೇವಾರೂಪದಲ್ಲಿ ನಡೆಸುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರ ಯಕ್ಷಗಾನ ಸ್ಥಳಕ್ಕೆ ಭೇಟಿ ನೀಡಿ ಕುಶಲೋಪರಿ ನಡೆಸಿದರು. ಗುಜ್ಜಾಡಿಗೆ ಆಗಮಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗಣಪತಿ ಮೇಸ್ತ ಮತ್ತು ಸಹೋದರರು ಸ್ವಾಗತಿಸಿದರು.
ಜ. 31ರಿಂದ ಯುವಜನ ಮೇಳ
ಮಣಿಪಾಲ: ಈ ಬಾರಿಯ ರಾಜ್ಯಮಟ್ಟದ ಯುವಜನ ಮೇಳವನ್ನು ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ನಡೆಸಲಾಗುತ್ತಿದ್ದು, ಇದರ ಪೂರ್ವಭಾವಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆಯಿತು. ಜ. 31, ಫೆ. 1 ಮತ್ತು 2ರಂದು ಈ ಯುವಜನ ಮೇಳ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು 1000 ಮಂದಿ ಆಗಮಿಸುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ರಾಜ್ಯ ಯುವಜನ ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದು ಸಚಿವರು ಹೇಳಿದರು. ಯುವಜನ ಮೇಳದ ಸಂಘಟನೆಗಾಗಿ ವಿವಿಧ ಸಮಿತಿಗಳನ್ನು ಈ ಸಭೆಯಲ್ಲಿ ರಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ. ಬೋರಲಿಂಗಯ್ಯ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮಾ ಇದ್ದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಸ್ವಾಗತಿಸಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಜಿಗುಪ್ಸೆ; ವ್ಯಕ್ತಿ ಆತ್ಮಹತ್ಯೆ
ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಿವಳ್ಳಿ ಗ್ರಾಮದ ಲಾಡ್ಜ್ನಲ್ಲಿ ಬುಧವಾರ ನಡೆದಿದೆ. ರಂಗಸ್ವಾಮಿ (43) ಮೃತರು. ಇವರು ಇತ್ತೀಚಿಗೆ ಶಿಕ್ಷಕ ವೃತ್ತಿಯಿಂದ ಅಮಾನತುಗೊಂಡಿದ್ದು, ಇದೇ ಚಿಂತೆಯಿಂದ ರಕ್ತದೊತ್ತಡ ಕಾಯಿಲೆಗೆ ತುತ್ತಾಗಿದ್ದರು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕಾಯಿಲೆ ಗುಣಮುಖವಾಗದೆ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಪ್ರೇಮ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿಯಾಗಿ ಮಹಿಳೆ ಸಾವು
ಪಡುಬಿದ್ರಿ: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬಸ್ ಡಿಕ್ಕಿ ಹೊಡೆದು, ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಹೆಜಮಾಡಿ ಗ್ರಾಮದ ಶಿವನಗರ ಎಂಬಲ್ಲಿ ಬುಧವಾರ ನಡೆದಿದೆ. ಸರೋಜ ಗಡಿಯಾರ್ ಮೃತರು. ಇವರು ಶಿವನಗರದಲ್ಲಿ ರಸ್ತೆ ದಾಟಲು ನಿಂತಿರುವಾಗ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಬಿದ್ದ ಸರೋಜಾ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮಣಿಪಾಲ: ಮಣಿಪಾಲ ಪ್ರೆಸ್ಸಿನ ಯುನಿಟ್ ಸಿಬ್ಬಂದಿ ಪ್ರೆಸ್ಸಿನ ಗೋಡೌನಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಸುಂದರ ನಾಯಕ್ (36) ಮೃತರು. ಬಡಗುಬೆಟ್ಟು ಗ್ರಾಮದ ನಿವಾಸಿ, ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಗೋಡೌನ್ನ ಮಾಡಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ ಪೂಜಾರಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಯಾಂಡ್ರಾ ಸೋನ್ಸ್ ರಾಜ್ಯಮಟ್ಟಕ್ಕೆ ಆಯ್ಕೆ
ಉಡುಪಿ: ಇತ್ತೀಚೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಯಾಂಡ್ರಾ ಸೋನ್ಸ್ ಅವರು ಶಾಟ್ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಮಹಿಳೆಯರ ವಿಭಾಗದ ವೈಯುಕ್ತಿಕ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಅಲ್ಲದೇ ಅವರು ಮುಂದೆ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ.
ಇಂದಿನಿಂದ ಎನ್ನೆಸ್ಸೆಸ್ ವಾರ್ಷಿಕ ಶಿಬಿರ
ಮಣಿಪಾಲ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವು ಡಿ.20ರಿಂದ 26ರ ತನಕ ಅಲೆವೂರು ಪ್ರಗತಿ ನಗರದ ಕಾರಂತ ಕಲಾ ಗ್ರಾಮದಲ್ಲಿ ನಡೆಯಲಿದೆ. ಶಿಬಿರವನ್ನು ಶುಕ್ರವಾರ ಮಧ್ಯಾಹ್ನ 3ಕ್ಕೆ ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ.ಪಿ. ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ.
ನಾಳೆಯಿಂದ
ಯುವ ಚೈತನ್ಯ ಶಿಬಿರ
ಹೆಬ್ರಿ: ಶ್ರೀ ರವಿಶಂಕರ್ ಗುರೂಜಿ ನಿರ್ದೇಶಿತ ಯುವ ಚ್ಯೆತನ್ಯ ಶಿಬಿರ ಡಿ.21ರಿಂದ 24ರ ವರೆಗೆ ಬೆಳಗ್ಗೆ 9ರಿಂದ ಸಂಜೆ 3ರವರೆಗೆ ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ನ ಸಹಯೋಗದಿಂದ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಾಹಿತಿಗೆ: ದೂ.ಸಂಖ್ಯೆ 9448931609.
22ರಂದು ರೇಕಿ
ಚಿಕಿತ್ಸೆ ಶಿಬಿರ
ಉಡುಪಿ: ಡಿವೈನ್ ಹೀಲಿಂಗ್ ಫೌಂಡೇಶನ್ ಶೃಂಗೇರಿ ವತಿಯಿಂದ ಬ್ರಹ್ಮಾವರದ ಉನ್ನತಿ ಸಭಾಭವದಲ್ಲಿ 22ರಂದು ಬೆಳಗ್ಗೆ 9 ರಿಂದ 4 ರ ವರೆಗೆ ರೇಕಿ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿವಮೊಗ್ಗದ ವೈದ್ಯ ಡಾ. ಸತ್ಯನಾರಾಯಣ ರೇಕಿ ದೀಕ್ಷೆ ಪ್ರಾಯೋಗಿಕ ತರಬೇತಿ, ರೇಕಿ ಚಿಕಿತ್ಸೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶಾಸಕರಿಗೆ ಮನವಿ ಸಲ್ಲಿಕೆ
ಉಡುಪಿ: ಇಲ್ಲಿನ ಮೂಡಸಗ್ರಿ ವಾರ್ಡಿನ ಲಕ್ಷ್ಮೀಂದ್ರನಗರ- ಹಯಗ್ರೀವ ನಗರದಲ್ಲಿರುವ ಬಹುಮಹಡಿ ವಸತಿ ಸಮುಚ್ಚಯದ ಕೊಳಚೆ ನೀರಿನ ವಿಲೇವಾರಿಯ ಕುರಿತು ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಜನಸ್ಪಂದನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಯಿತು.
ವಾಲಿಬಾಲ್: ಆಳ್ವಾಸ್ಗೆ ಪ್ರಶಸ್ತಿ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಸೌಕೂರು ಅಂತಯ್ಯ ಶೆಟ್ಟಿ ಸ್ಮಾರಕ ವಿ.ವಿ. ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿತು. 47 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಮಂಗಳೂರು ವಿ.ವಿ. ಕ್ಯಾಂಪಸ್ ಕೋಣಾಜೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ಮಾಜಿ ಶಾಸಕ ರಘುಪತಿ ಭಟ್ ಬಹುಮಾನ ವಿತರಿಸಿದರು. ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಆರ್ಶೀವರ್ಚಿಸಿದರು. ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಕಿಶೋರ್ ಕುಮಾರ್, ಪ್ರಾಂಶುಪಾಲ ಕೆ. ಸದಾಶಿವ ರಾವ್ ಇದ್ದರು.