ಸೈನೈಡ್ ಮೋಹನ್ ಶಿಕ್ಷೆ ಪ್ರಮಾಣ ಇಂದು ಪ್ರಕಟ
ಮಂಗಳೂರು: ಸೈನೈಡ್ ಕಿಲ್ಲರ್ ಮೋಹನ ಕುಮಾರ್ ಯುವತಿಯರನ್ನು ಹತ್ಯೆ ಮಾಡಿದ ಘಟನೆಯಲ್ಲಿ ಸಾಬೀತಾದ ಮೂರು ಪ್ರಕರಣಗಳಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.20ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಗುರುವಾರ ಅಂತಿಮ ಹಂತದ ವಾದ, ಪ್ರತಿವಾದ ನಡೆಯಿತು.
ಸರ್ಕಾರಿ ಅಭಿಯೋಜಕ ಚೆಯ್ಯಬ್ಬ ಬ್ಯಾರಿ ವಾದ ಮಂಡಿಸಿ, ಅಮಾನವೀಯ ರೀತಿಯಲ್ಲಿ ವರ್ತಿಸಿ ಅಮಾಯಕ ಯುವತಿಯರನ್ನು ಕೊಂದ ಸೈನೈಡ್ ಮೋಹನ್ ಕುಮಾರ್‌ಗೆ ಮರಣದಂಡನೆಯೇ ಸೂಕ್ತ. ನ್ಯಾಯಾಧೀಶರು ಆತನಿಗೆ ಮರಣದಂಡನೆ ವಿಧಿಸಬೇಕು ಎಂದು ನ್ಯಾಯಾಧೀಶರನ್ನು ಮನವಿ ಮಾಡಿದರು.
ಸೈನೈಡ್ ನೀಡಿ ಆ ಯುವತಿಯರು ಸಾಯುವುದನ್ನು ಕಣ್ಣಾರೆ ಕಂಡರೂ ಒಂದಿಷ್ಟೂ ಪಾಪಪ್ರಜ್ಞೆ ಕಾಡದೆ ತನ್ನ ಕೃತ್ಯವನ್ನು ಮುಂದುವರಿಸಿದ ಮೋಹನ ಕುಮಾರ್ ಸಮಾಜದಲ್ಲಿ ಇರಲು ಯೋಗ್ಯನಲ್ಲ. ಕಲ್ಲು ಹೃದಯದ ಆತನಿಗೆ ಮರಣ ದಂಡನೆಯನ್ನೇ ವಿಧಿಸಬೇಕು ಎಂದು ಚೆಯ್ಯಬ್ಬ ಬ್ಯಾರಿ ವಾದಿಸಿದರು.
ನಂತರ ನ್ಯಾಯಾಧೀಶರ ಮುಂದೆ ನಿಂತ ಮೋಹನ ಕುಮಾರ್, ತಮ್ಮ ಮೇಲೆ ದಾಖಲಾದ ಆರೋಪಗಳಲ್ಲಿ ಹುರುಳಿಲ್ಲ. ಕೆಲವು ಸತ್ಯಕ್ಕೆ ದೂರವಾದ್ದು ಎಂದು ವಿವರಿಸಿದ.
ಆದರೆ, ನ್ಯಾಯಾಧೀಶರಾದ ಬಿ.ಕೆ.ನಾಯ್ಕ, 49 ಸಾಕ್ಷಿಗಳು ಮೋಹನ್ ಕುಮಾರ್ ವಿರುದ್ಧ ಸಾಕ್ಷ್ಯ ನುಡಿದಿರುವುದನ್ನು ಸ್ಪಷ್ಟಪಡಿಸಿದರು.
ವಾದ ವಿವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಡಿ.20ಕ್ಕೆ ಕಾಯ್ದಿರಿಸಿದರು. ಸಂಜೆ 3ರ ವೇಳೆಗೆ ಮೂರು ಪ್ರಕರಣಗಳ ಕುರಿತು ಶಿಕ್ಷೆಯ ಪ್ರಮಾಣ ಪ್ರಕಟಿಸುವರು.
ಆರೋಪಿ ಮೋಹನ ಕುಮಾರ್‌ನ ಕಪಟ ಮೋಹ ಪಾಶಕ್ಕೆ ಸಿಲುಕಿ ಬಲಿಯಾದ 20 ಮಂದಿ ಯುವತಿಯರ ಪೈಕಿ ಮೊದಲ ಮೂರು ಪ್ರಕರಣವಾದ ವಾಮದಪದವಿನ ಲೀಲಾವತಿ, ಬಂಟ್ವಾಳ ಬರಿಮಾರ್‌ನ ಅನಿತಾ, ಸುಳ್ಯ ಪೆರುವಾಜೆಯ ಸುನಂದಾ ಪ್ರಕರಣದ ವಿಚಾರಣೆ ಈಗಾಗಲೇ ಮುಗಿದಿದೆ.