ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನನ್ನ ಕೃತಿಗಳು ಸಂಶೋಧನೆಯ ಫಲವಷ್ಟೇ, ಅದರಲ್ಲಿ ಸಮಾಜಸೇವೆ ಹುಡುಕಬೇಡಿ: ಭೈರಪ್ಪ

Mainashree
Updated On : 21 Dec 2013, 12:16 pm

ವಿದ್ಯಾಗಿರಿ, ಮೂಡುಬಿದಿರೆ: 'ನನ್ನ ಕೃತಿಗಳಲ್ಲಿ ಸಮಾಜ ಸೇವೆಯನ್ನು ಹುಡುಕಬೇಡಿ. ಯಾಕೆಂದರೆ ನನ್ನ ಕೃತಿಗಳೇನಿದ್ದರೂ ಸತ್ಯಶೋಧನೆಯ ಫಲವಷ್ಟೇ' ಎಂದು ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
 ಅವರು ಆಳ್ವಾಸ್ ವಿಶ್ವನುಡಿಸಿರಿಯಲ್ಲಿ ಶುಕ್ರವಾರ ಸಾಹಿತ್ಯ ಕುರಿತ ಸಮಾವೇಶ ಗೋಷ್ಠಿಯಲ್ಲಿ ಮಾತನಾಡಿದರು.

ಸತ್ಯ ಹೇಳಲು ಕಾದಂಬರಿಯಲ್ಲಿ ಹೆಚ್ಚು ಸ್ವಾತಂತ್ರ್ಯ: ನಾನು ತತ್ವಶಾಸ್ತ್ರದ ವಿದ್ಯಾರ್ಥಿ. ಸತ್ಯ ಅನ್ವೇಷಣೆಯೇ ನನ್ನ ಕೃತಿಗಳ ಮೂಲ ಉದ್ದೇಶ. ನನ್ನ ಪ್ರತಿ ಕೃತಿಯೂ ಸತ್ಯದ ಹುಡುಕಾಟದ ಫಲವೇ ಹೊರತು ಬೇರೇನೂ ಅಲ್ಲ. ತತ್ವಶಾಸ್ತ್ರದ ಮೂಲಕವೂ ಸತ್ಯವನ್ನು ಹೇಳಬಹುದು. ಆದರೆ ಕಾದಂಬರಿಯಲ್ಲಿ ಕತೆಯ ಪಾತ್ರಗಳ ಮೂಲಕ ಸತ್ಯ ಹೇಳುವಾಗ ನನಗೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ.
 ಆದ್ದರಿಂದ ನಾನು ಆ ಮಾರ್ಗವನ್ನು ಆರಿಸಿಕೊಂಡೆ. ಹೀಗಾಗಿ ಸಮಾಜ ಸೇವೆಯನ್ನು ನನ್ನ ಕೃತಿಗಳಲ್ಲಿ ಹುಡುಕಬೇಡಿ. ಸಮಾಜ ಸೇವೆಯನ್ನು ನೋಡುವುದಾದರೆ ನನ್ನ ಖಾಸಗಿ ಜೀವನ ನೋಡಿ. ಅದು ಬಿಟ್ಟು ನನ್ನ ಕೃತಿಗಳಲ್ಲಿ ಸಮಾಜ ಸೇವೆ ಹುಡುಕಿದರೆ ಅಲ್ಲಿ ನಿಮಗೆ ಅದು ಸಿಗುವುದಿಲ್ಲ ಎಂದು ಅವರು ಹೇಳಿದರು.

ಕನ್ನಡ ಶಾಲೆ ಉಳಿಯದಿದ್ದರೆ ಕನ್ನಡ ಸಾಹಿತ್ಯವೇ ನಾಶ: ಕನ್ನಡ ಶಾಲೆ, ಕನ್ನಡ ಭಾಷೆ ಉಳಿಯದಿದ್ದರೆ ಕನ್ನಡ ಸಾಹಿತ್ಯವೂ ಉಳಿಯುವುದಿಲ್ಲ. ಇಂದು ಅಭಿವೃದ್ಧಿ, ಸಮಾನತೆ ನೆಪದಲ್ಲಿ ಹಳ್ಳಿಗಳ ಶಾಲೆಗಳಿಗೂ ಆಂಗ್ಲಮಾಧ್ಯಮ ತರಲು ನಮ್ಮ ರಾಜಕಾಣಿಗಳು ಸಿದ್ಧರಾಗಿದ್ದಾರೆ. ಕನ್ನಡ ಶಾಲೆಗಳೇ ಇಲ್ಲದ ಮೇಲೆ ಕನ್ನಡ ಉಳಿಯಲು ಹೇಗೆ ಸಾಧ್ಯ. ಕನ್ನಡ ಕಲಿಯದವನು ಕನ್ನಡ ವೃತ್ತಪತ್ರಿಕೆಗಳನ್ನು ಕೂಡ ಓದಲಾರ. ಅಂಥವನು ಸಾಹಿತ್ಯ ಓದುವುದಿಲ್ಲ. ಸಾಹಿತ್ಯ ರಚನೆಯನ್ನೂ ಮಾಡುವುದಿಲ್ಲ. ಹೀಗಾಗಿ ಕನ್ನಡ ಶಾಲೆಗಳು ಉಳಿಯದಿದ್ದಲ್ಲಿ ಕನ್ನಡ ಸಾಹಿತ್ಯವೂ ಭವಿಷ್ಯದಲ್ಲಿ ನಶಿಸುವ ಅಪಾಯವಿದೆ.
ಭಾಷೆ ಮತ್ತು ಸಾಹಿತ್ಯ ನಶಿಸಿದರೆ ನಮ್ಮ ಸಂಸ್ಕೃತಿಯೂ ನಶಿಸುತ್ತದೆ. ಯಾಕೆಂದರೆ ಒಂದು ಭಾಷೆ ಸಂಸ್ಕೃತಿಯ ಅಭಿವ್ಯಕ್ತಿಯಾಗಿ ಬೆಳೆದಿರುತ್ತದೆ. ಭಾಷೆ ನಶಿಸಿದರೆ ಸಂಸ್ಕೃತಿಯೂ ನಶಿಸುತ್ತದೆ ಎಂದು ಭೈರಪ್ಪ ಹೇಳಿದರು. ಸಾಹಿತ್ಯ ಸಮಾವೇಶ ಗೋಷ್ಠಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ವಿಶ್ವನುಡಿಸಿರಿ ಸರ್ವಾಧ್ಯಕ್ಷ ಪ್ರೊ.ಬಿ.ಎ. ವಿವೇಕ ರೈ, ಸಾಹಿತಿ ನಾ. ದಾಮೋದರ ಶೆಟ್ಟಿ ಇದ್ದರು.

ಕನ್ನಡಿಗರ ಮೊದಲ ಧರ್ಮ ಕನ್ನಡ: ಹಂಪನಾ
ಮೂಡುಬಿದಿರೆ:
ಕನ್ನಡಿಗರಿಗೆ ಮೊದಲ ಧರ್ಮ ಕನ್ನಡ. ಅದಕ್ಕೆ ನಾವೇ ಶತ್ರು. ಅಂಕಲ್, ಆಂಟಿ ಎಂಬ ಪದಬಳಕೆಗಳಿಂದ ನಮ್ಮ ಕನ್ನಡಸ್ತಿಕೆಯನ್ನು ನಾವೇ ಬಿಡುತ್ತಿದ್ದೇವೆ ಎಂದು ನಾಡೋಜ ಹಂಪ ನಾಗರಾಜಯ್ಯ ವಿಷಾದಿ  ವ್ಯಕ್ತಪಡಿಸಿದರು. ಆಳ್ವಾಸ್ ವಿಶ್ವ ನುಡಿಸಿರಿಯಲ್ಲಿ 'ಧರ್ಮ' ಎಂಬ ವಿಷಯದ ಬಗ್ಗೆ ಅವರು ಶುಕ್ರವಾರ ಉಪನ್ಯಾಸ ನೀಡಿದರು. ಭಾಷೆಯಲ್ಲಿ ಮಡಿವಂತಿಕೆ ಬೇಕಿಲ್ಲ. ಅದನ್ನು ಬೆಳೆಸಲು ಮನಸ್ಸು ಮಾತ್ರ ಅವಶ್ಯಕ. ಅದೇ ಹಳ್ಳಿಗಳಿಗೆ ಹೋದರೆ, ಥರ್ಮಾಮೀಟರ್‌ಗೆ ಜ್ವರಕಡ್ಡಿ, ನೈಲ್ ಕಟರ್‌ಗೆ ಉಗುರುಳಿ ಎನ್ನುತ್ತಾರೆ. ಅವರ ಭಾಷಾ ಸೊಗಡನ್ನು ಮೆಚ್ಚಬೇಕಾದದ್ದೆ ಹಾಗೂ ಅವರೇ ನಮ್ಮ ಭಾಷೆಯನ್ನು ಬೆಳೆಸುತ್ತಿರುವವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement