ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬ್ರಹ್ಮರಕೂಟ್ಲು ಟೋಲ್ ಶುಲ್ಕ; ರಾಜ್ಯ ಸಾರಿಗೆ ಪ್ರಯಾಣಿಕರ ಕಿಸೆಗೂ ಕತ್ತರಿ!

Mainashree
Updated On : 21 Dec 2013, 10:48 am

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ರಹ್ಮರಕೂಟ್ಲುವಿನ ಟೋಲ್‌ಗೇಟ್ ಮೂಲಕ ಹಾದುವ ಹೋಗುವ ರಾಜ್ಯ ಸಾರಿಗೆ ಸಂಸ್ಥೆಯ ಪ್ರಯಾಣಿಕರ ಕಿಸೆಗೆ ಕೆಎಸ್‌ಆರ್‌ಟಿಸಿ ಕತ್ತರಿ ಹಾಕಲು ಆರಂಭಿಸಿದೆ.
ಕಳೆದೆರಡು ದಿನಗಳಿಂದ ಬ್ರಹ್ಮರಕೂಟ್ಲು ಟೋಲ್‌ಗೇಟ್ ಹಾದು ಹೋಗುವ ಬಸ್ ಪಯಾಣಿಕರಿಗೆ ಟಿಕೆಟ್ ದರಕ್ಕಿಂತ 4 ಹೆಚ್ಚುವರಿ ದರವನ್ನು ಪ್ರತಿ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಕೆಎಸ್‌ಆರ್‌ಟಿಸಿಯ ಈ ಹಠಾತ್ ನಿರ್ಧಾರದಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದು, ಟೋಲ್‌ಗೇಟ್ ಹಾಗೂ ಕೆಎಸ್‌ಆರ್‌ಟಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬುಧವಾರ ಬೆಳಗ್ಗಿನಿಂದ ಕೆಎಸ್‌ಆರ್‌ಟಿಸಿ ಈ ಹೆಚ್ಚುವರಿ ದರವನ್ನು ಪ್ರಯಾಣಿಕರ ಮೇಲೆ ಹೊರಿಸುತ್ತಿದ್ದು, ಲೋಕಲ್ ಬಸ್ ಪ್ರಯಾಣಿಕರಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಡಿ.5ರಿಂದಲೇ ಟೋಲ್ ಸಂಗ್ರಹ ಆರಂಭಗೊಂಡಿದ್ದು, ಈತನಕ ಸರ್ಕಾರಿ ಬಸ್‌ಗಳು ನಿತ್ಯ ಶುಲ್ಕ ನೀಡಿ ಸಂಚರಿಸುತ್ತಿದ್ದವು. ಆದರೆ ಬುಧವಾರದಿಂದ ಪ್ರಯಾಣಿಕರಿಗೆ ಟಿಕೆಟ್ ಮೇಲೆ ಹೆಚ್ಚುವರಿ ದರವನ್ನು ಹೇರಲಾಗುತ್ತಿದೆ.
ದಿನಂಪ್ರತಿ ಸಾವಿರಕ್ಕೂ ಅಧಿಕ ಟ್ರಿಪ್: ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೀಡುವ ಮಾಹಿತಿಯಂತೆ ಪ್ರತಿದಿನ ಬ್ರಹ್ಮರಕೂಟ್ಲು ಟೋಲ್‌ಗೇಟ್ ಹಾದು ಮಂಗಳೂರು ವಿಭಾಗದಿಂದ ನಿತ್ಯ 900 ಟ್ರಿಪ್, ಪುತ್ತೂರು ವಿಭಾಗ ದಿಂದ 550 ಟ್ರಿಪ್ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸರ್ಕಾರಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಟೋಲ್ ಶುಲ್ಕ ನೀಡುವುದಕ್ಕೇ ರಾಜ್ಯ ಸಾರಿಗೆ ಸಂಸ್ಥೆ ಲಕ್ಷಾಂತರ ಹಣ ವ್ಯಯಿಸಬೇಕಾಗುತ್ತದೆ. ಹಾಗಾಗಿ ಈ ಟೋಲ್‌ಗೇಟ್ ಹಾದು ಹೋಗುವ ಪ್ರಯಾಣಿಕರಿಂದ ಹೆಚ್ಚುವರಿ 4 ವಿಧಿಸಲಾಗಿದೆ. ಇದು ಟೋಲ್‌ಗೇಟ್ ಹಾದು ಹೋಗುವ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ. ಬಸ್ ಪ್ರಯಾಣ ದರದ ಏರಿಕೆ ಅಲ್ಲ ಎಂದು ಹೇಳಿದ್ದಾರೆ.
ಹಿಂದಿಗಿಂತ ಮೂರು ಪಟ್ಟು...: ಬ್ರಹ್ಮರಕೂಟ್ಲುವಿನ ಟೋಲ್‌ಗೇಟ್‌ನಲ್ಲಿ ಈಗ ಈ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಹೆದ್ದಾರಿ ಶುಲ್ಕ ನೀಡಬೇಕಾಗಿದೆ. ಬಸ್‌ಗಳಿಗೆ ಟ್ರಿಪ್‌ವೊಂದಕ್ಕೆ 60 ಶುಲ್ಕ, ದಿನಕ್ಕೆ 90 ಹಾಗೂ ಮಾಸಿಕ ಪಾಸ್ ಮಾಡಿಸಿಕೊಂಡರೆ ಕೆಎಸ್‌ಆರ್‌ಟಿಸಿ 16 ಲಕ್ಷವನ್ನು ಗುತ್ತಿಗೆದಾರರಿಗೆ ನೀಡಬೇಕಾಗಿದೆ.  ಈ ಕಾರಣಕ್ಕಾಗಿ ಟೋಲ್ ಅನ್ನು ಪ್ರಯಾಣಿಕರ ಮೇಲೂ ಹೊರಿಸಲಾಗಿದೆ. ಸಂಸ್ಥೆಯ ಕೇಂದ್ರ ಕಚೇರಿಯ ಅನುಮತಿ ಪಡೆದೇ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಮರ್ಥನೆ.
ಇದೆಂಥಾ ನ್ಯಾಯ...: ಈಗಿನ ಹೆಚ್ಚುವರಿ ಶುಲ್ಕದ ಪ್ರಕಾರ ಪ್ರತಿ ಪ್ರಯಾಣಿಕ 4 ಹೆಚ್ಚು ಹಣ ಪಾವತಿಸಬೇಕು. ದಿನಕ್ಕೆ ಪ್ರತಿ ಬಸ್‌ಗೆ 90 ಪಾವತಿಸಬೇಕಾಗಿದೆ. 50 ಮಂದಿ ಪ್ರಯಾಣಿಕರಿದ್ದಲ್ಲಿ ಕೆಎಸ್‌ಆರ್‌ಟಿಸಿಗೆ ಬರುವ ಆದಾಯ 200. ಪ್ರತಿ ದಿನ 5-6 ಟ್ರಿಪ್ ಹೊಡೆಯುವ ಬಸ್‌ಗಳು 1200ಅನ್ನು ಪ್ರಯಾಣಿಕರಿಂದ ವಸೂಲಿ ಮಾಡಿದಂತಾಗುತ್ತದೆ. ಆದರೆ ವಾಸ್ತವದಲ್ಲಿ ಆ ಬಸ್ ಟೋಲ್ ಗುತ್ತಿಗೆದಾರರಿಗೆ ಪಾವತಿಸಬೇಕಾದ್ದು 90 ಮಾತ್ರ. ಆದರೆ ವಸೂಲು ಮಾಡುವುದು ಹತ್ತುಪಟ್ಟಿಗಿಂತಲೂ ಹೆಚ್ಚು. ಇದನ್ನೇ ಪ್ರಯಾಣಿಕರು ಪ್ರಶ್ನಿಸುತ್ತಿರುವುದು. ಇದೆಂಥಾ ನ್ಯಾಯ.. ಕೆಎಸ್‌ಆರ್‌ಸಿ ಅಧಿಕಾರಿಗಳೇ ಇದಕ್ಕೆ ಉತ್ತರ ಹೇಳಬೇಕು.

ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement