ಚುನಾವಣೆ ಬಂದಾಗ ಸಿಂಹ ಕುರಿಯನ್ನೂ ಪ್ರೀತಿಯಿಂದ ಮಾತನಾಡಿಸುತ್ತದೆ...
ಅರಣ್ಯದಲ್ಲಿ ತಾಯಿ ಮತ್ತು ಮರಿ ಕುರಿ ಹೋಗುತ್ತಿದ್ದವಂತೆ. ದಿಢೀರನೆ ಸಿಂಹ ಕಾಣಿಸಿಕೊಂಡಿತಂತೆ. ಆಗ ತಾಯಿ ಕುರಿ ಮತ್ತು ಮರಿ ಕುರಿ ಇಬ್ಬರೂ ಥರಥರನೆ ನಡುಗತೊಡಗಿ, ಇವತ್ತು ನಮ್ಮ ಕತೆ ಮುಗಿಯಿತು. ಮರಿ ಬೆಳಗ್ಗಿನ ಉಪಾಹಾರವಾದರೆ, ತಾಯಿ ಮಧ್ಯಾಹ್ನದ ಊಟ ಎಂದು ಅಂದುಕೊಂಡರಂತೆ.
ಆದರೆ, ಸಿಂಹ ಹತ್ತಿರ ಬಂದು, ಮರಿಕುರಿಯ ಬೆನ್ನು ಸವರಿ, ದೀರ್ಘಾಯುಷ್ಯಮಾನುಭವ ಎಂದು ಆಶೀರ್ವದಿಸಿ ಹೋಯಿತಂತೆ. ಇದರಿಂದ ಅಚ್ಚರಿಗೊಂಡ ಮರಿಕುರಿ, ತಾಯಿ ಕುರಿಯ ಬಳಿ ಏನಮ್ಮಾ ಇದು ಆಶ್ಚರ್ಯ ಎಂದು ಕೇಳಿತಂತೆ. ಅದಕ್ಕೆ ತಾಯಿಕುರಿ, ಆಶ್ಚರ್ಯವೇನಿಲ್ಲ ಅರಣ್ಯದಲ್ಲಿ ಚುನಾವಣೆ ಹತ್ತಿರ ಬಂದಿರಬೇಕು ಎಂದು ಹೇಳಿತಂತೆ
ಈ ಕತೆಯ ಮೂಲಕ ರಾಜಕಾರಣಿಗಳ ನಿಜಗುಣವನ್ನು ವಿಶ್ಲೇಷಿಸಿದವರು ಮಾಜಿ ಸಚಿವ ಸುರೇಶ್ ಕುಮಾರ್. ಈ ದೇಶದಲ್ಲಿ ಅತ್ಯಂತ ಟೀಕೆಗೆ ಗುರಿಯಾದವರು ರಾಜಕಾರಣಿಗಳು ಮತ್ತು ಅದನ್ನು ಸತ್ಯಮಾಡಲು ಪದೇಪದೇ ಪ್ರಯತ್ನಿಸುತ್ತಿರುವವರೂ ಅವರೇ. ಆದರೆ, ಸಂಪೂರ್ಣ ದೇಶದ ಜವಾಬ್ದಾರಿಯನ್ನು ರಾಜಕಾರಣಿಗಳ ಕೈಗೆ ಒಪ್ಪಿಸಿ ಅವರ ಬಗ್ಗೆ ಅಷ್ಟು ತಾತ್ಸಾರ ತಾಳುವುದು ಸರಿಯಲ್ಲ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ. ಜನ ಒಳ್ಳೆಯ ರಾಜಕಾರಣ ಮತ್ತ ರಾಜಕಾರಣಿಯನ್ನು ಬಯಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.