ಶಿರಾಡಿ: ಟ್ಯಾಂಕರ್ ಮಗುಚಿ ಹೆದ್ದಾರಿಯಲ್ಲಿ ಅನಿಲ ಸೋರಿಕೆ
ಉಪ್ಪಿನಂಗಡಿ: ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ರಾ.ಹೆ. 75 ರಲ್ಲಿ ಅಡುಗೆ ಅನಿಲ ಟ್ಯಾಂಕರ್ ಮಗುಚಿ ಬಿದ್ದು, ಅನಿಲ ಸೋರಿಕೆಯುಂಟಾಗಿ ಭೀತಿಯ ವಾತಾವರಣ ಮೂಡಿದ ಘಟನೆ ಶನಿವಾರ ಮುಂಜಾನೆ ಸುಮಾರು 7 ಗಂಟೆ ವೇಳೆ ಸಂಭವಿಸಿದೆ.
ಅನಿಲ ಸೋರಿಕೆಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನ ಎಂಆರ್ಪಿಎಲ್ನಿಂದ ಬೆಂಗಳೂರು ಕಡೆಗೆ ಅನಿಲವನ್ನೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿನ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ಸುದ್ದಿ ತಿಳಿದ ಪೊಲೀಸರು ಕೂಡಲೇ ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಕರೆಸಿ, ವಾಹನ ಸಂಚಾರವನ್ನು ತಡೆಹಿಡಿದರು. ಅಪಘಾತಕ್ಕೀಡಾದ ಸ್ಥಳ ಬಹುತೇಕ ಕಾಡಿನಿಂದಾವೃತವಾಗಿದ್ದ ಹಿನ್ನೆಲೆಯಲ್ಲಿ ಪಸರಿಸಿದಂತಹ ಅನಿಲ ಅಗ್ನಿಸ್ಪರ್ಶಕ್ಕೆ ಸಿಲುಕಲಿಲ್ಲ. ಘಟನೆಯಿಂದಾಗಿ ಟ್ಯಾಂಕರ್ ಚಾಲಕ ತಮಿಳುನಾಡಿನ ನಿವಾಸಿಗಳಾದ ಸೆಲ್ವಂ ಮತ್ತು ಕ್ಲೀನರ್ ಖಾದರ್ ಅಲ್ಪ ಪ್ರಮಾಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಗ್ಯಾಸ್ ವರ್ಗಾವಣೆ: ಅಪಘಾತಕ್ಕೀಡಾಗಿ ಅನಿಲ ಸೋರಿಕೆ ಕಂಡ ಟ್ಯಾಂಕರ್ನಿಂದ ಅನಿಲವನ್ನು ಬೇರೊಂದು ಟ್ಯಾಂಕರ್ಗೆ ವರ್ಗಾಯಿಸುವ ಕಾರ್ಯ ಮಂಗಳೂರು ಎಂಆರ್ಪಿಎಲ್ ಸಂಸ್ಥೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ 6 ಅಗ್ನಿ ಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿ ಬಂದ ಎಂಆರ್ಪಿಎಲ್ ಸಂರಕ್ಷಣಾ ತಂಡ 10 ಗಂಟೆ ಸುಮಾರಿಗೆ ಅಪಘಾತ ಸ್ಥಳವನ್ನು ತಲುಪಿ ಕಾರ್ಯಾಚರಣೆಗೆ ತೊಡಗಿತ್ತು. ತನ್ಮೂಲಕ ನಿರ್ಲಕ್ಷ್ಯ ವಹಿಸುವ ಆಪಾದನೆಗೆ ಸಿಲುಕಿದ್ದ ಎಂಆರ್ಪಿಎಲ್ ತಂಡ ಈ ಬಾರಿ ತ್ವರಿತ ಹಾಗೂ ಕಾಳಜಿಯುಕ್ತ ನಡೆಯನ್ನು ಪ್ರದರ್ಶಿಸಿತು.
ವಾಹನ ಸಂಚಾರಕ್ಕೆ ತಡೆ: ಟ್ಯಾಂಕರ್ ಅಪಘಾತದಿಂದ ಅನಿಲ ಸೋರಿಕೆಯುಂಟಾಗಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಮತ್ತು ಗುಂಡ್ಯದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು. ಉಭಯ ದಿಕ್ಕಿನಿಂದ ಸಂಚರಿಸುವ ವಾಹನಗಳನ್ನು ಗುಂಡ್ಯ - ಸುಬ್ರಹ್ಮಣ್ಯ -ಕಡಬ ಮಾರ್ಗವಾಗಿ ಸಂಚಾರಕ್ಕೆ ನಿರ್ದೇಶಿಸಲಾಗಿದೆ.
ಘಟನಾ ಸ್ಥಳದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡ, ಸಂಚಾರಿ ಎಸ್.ಐ. ರಕ್ಷಿತ್ ನೇತೃತ್ವದ ಸಂಚಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳದ ರಕ್ಷಣಾಧಿಕಾರಿ ಲೋಕೇಶ್, ಉಪ್ಪಿನಂಗಡಿ ಕಂದಾಯ ಇಲಾಖಾಧಿಕಾರಿ ಮಂಜುನಾಥ ಸಹಿತ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.