ಸುಳ್ಯದಲ್ಲಿ ಸರಣಿ ಕಳವಿಗೆ ಯತ್ನ
ಸುಳ್ಯ: ಸುಳ್ಯ ನಗರದಲ್ಲಿ ಶನಿವಾರ ಮುಂಜಾನೆ 3.30ರ ಸುಮಾರಿಗೆ ಕರ್ಣಾಟಕ ಬ್ಯಾಂಕ್ ಸೇರಿದಂತೆ ಹಲವೆಡೆ ಕಳವು ಯತ್ನ ನಡೆದಿದೆ.
ಸುಳ್ಯದ ಮುಖ್ಯಪೇಟೆಯಲ್ಲಿನ ಕರ್ಣಾಟಕ ಬ್ಯಾಂಕ್, ಅದರ ಸಮೀಪದ ಕಂಪ್ಯೂಟರ್ ಸೈಬರ್, ಜಾಕೆ ಲೈಟ್ ಹೌಸ್‌ನ ಗೋಡೌನ್, ಮುಳಿಯ ಜ್ಯುವೆಲ್ಲರ್ಸ್, ಚೇತನ್ ಚಾಸ್ ಸೆಂಟರ್, ಕುರುಂಜಿಕಾರ್ ಸ್ಟೇಡರ್ಸ್, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಫ್ಯಾನ್ಸಿ, ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಶೂ ಬಿಝ್‌ಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ.
ಚೇತನ್‌ಚಾಸ್ ಸೆಂಟರ್‌ಗೆ ನುಗ್ಗಿದ ಕಳ್ಳರು ಅಲ್ಲಿದ್ದ ರು. 170 ಹಾಗೂ ಶೂ ಬಿಝ್ ಮಳಿಗೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ರು. 32,000 ಸಾವಿರ ಹಣವನ್ನು ಕದ್ದೊಯ್ದಿದ್ದಾರೆ.
ಶನಿವಾರ ಬೆಳಗ್ಗೆ ಕ್ರೈಂ ಎಸ್.ಐ. ಎಂ.ಎನ್.ರಾವ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿತು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಕರ್ಣಾಟಕ ಬ್ಯಾಂಕ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಮುಂಜಾನೆ 3.30ರ ವೇಳೆಗೆ 3 ಮಂದಿ ಒಳಪ್ರವೇಶಿಸಿದ ದೃಶ್ಯ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಳವುಗೈಯಲ್ಪಟ್ಟ ಬಹುತೇಕ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದರೂ ಇದರಲ್ಲಿ ಕೆಲವು ರಾತ್ರಿ ವೇಳೆ ಆಫ್ ಆಗಿದೆ.
ಕಾವಲುಗಾರನನ್ನು ಓಡಿಸಿದ್ದರು: ಕಳವು ಘಟನೆಯ ಮಧ್ಯೆ ಮುಖ್ಯ ರಸ್ತೆಯಲ್ಲಿರುವ ಎಚ್.ಡಿ.ಎಫ್.ಸಿ. ಬ್ಯಾಂಕ್ ಮುಂದೆ ಬಂದ ನಾಲ್ವರು ಅಲ್ಲಿದ್ದ ರಾತ್ರಿ ಕಾವಲುಗಾರನನ್ನು ಕಲ್ಲೆಸೆದು ಓಡಿಸಿದ್ದು, ಕಲ್ಲೇಟಿಗೆ ತುತ್ತಾದ ಆತ ಬಸ್ ನಿಲ್ದಾಣದತ್ತ ಓಡಿ, ರಿಕ್ಷಾ ಚಾಲಕರು, ಪೊಲೀಸರಿಗೆ ಮಾಹಿತಿ ನೀಡಿದರು. ಗಸ್ತು ಹೋಗಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಕಳ್ಳರು ಪರಾರಿಯಾಗಿದ್ದರು.