ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

15 ದಿನದಲ್ಲಿ ಮುಂದಿನ ನುಡಿಸಿರಿ, ವಿರಾಸತ್ ಸ್ವರೂಪ ಪ್ರಕಟ: ಆಳ್ವ

Mainashree
Updated On : 23 Dec 2013, 10:28 am

ವಿದ್ಯಾಗಿರಿ, ಮೂಡುಬಿದಿರೆ: ನಾಲ್ಕು ದಿನಗಳ ಕಾಲ ನಡೆದ ವಿಶ್ವ ನುಡಿಸಿರಿ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಇನ್ನು 15 ದಿನದಲ್ಲಿ ಮುಂದಿನ ವರ್ಷದ ನುಡಿಸಿರಿ, ವಿರಾಸತ್ ಸ್ವರೂಪ ನಿರ್ಧರಿಸಲಾಗುವುದು ಎಂದು ವಿಶ್ವ ನುಡಿಸಿರಿ ವಿರಾಸತ್ ರೂವಾರಿ ಡಾ. ಮೋಹನ ಆಳ್ವ ಹೇಳಿದ್ದಾರೆ.
ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ನುಡಿಸಿರಿ, ವಿರಾಸತ್ಗೆ 80 ಘಟಕ ರಚಿಸಲಾಗಿದ್ದು, ಸಮಾನ ಮನಸ್ಕರ ಜೊತೆ ಸೇರಿ ಸಭೆ ನಡೆಸುತ್ತೇವೆ. ಮುಂದಿನ ನುಡಿಸಿರಿ, ವಿರಾಸತ್ ಯಾವ ರೀತಿ ನಡೆಯಬೇಕು ಎಂದು ತೀರ್ಮಾನಿಸುತ್ತೇವೆ. ಆದಷ್ಟು ಯುವ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆ ಇದೆ ಎಂದರು.
ವಿಶ್ವ ನುಡಿಸಿರಿ, ವಿರಾಸತ್ ನೆನಪಿಗೆ ಮೂಡುಬಿದಿರೆ ಸ್ವರಾಜ್ ಮೈದಾನ ಬಳಿ 1 ಎಕರೆ ಜಾಗ ಖರೀದಿಸಿದ್ದು, ರು. 15 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು. ಆತ್ಯಾಧುನಿಕ, ಸುಸಜ್ಜಿತ ಭವನ ಮುಂದಿನ 2 ವರ್ಷದಲ್ಲಿ ಪೂರ್ತಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ವಿಶ್ವ ನುಡಿಸಿರಿಯಲ್ಲಿ ಭಾಗವಹಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ವೈರುಧ್ಯ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ ಡಾ. ಆಳ್ವ, ನುಡಿಸಿರಿ ಅವರ ಕೂಸು. ಅವರು ಆರಂಭದಿಂದಲೇ ಇದನ್ನು ಪ್ರೋತ್ಸಾಹಿಸಿ ಸಲಹೆ ನೀಡುತ್ತಾ ಬಂದಿದ್ದಾರೆ. ಅವರು ನುಡಿಸಿರಿ ಕುರಿತಂತೆ ಯಾಕೆ ವಿರೋಧ ಮಾತನಾಡಿದರೋ ಗೊತ್ತಿಲ್ಲ. ನಾನು, ಅವರು ಸ್ನೇಹಿತರಾಗಿದ್ದು, ಸಾಕಷ್ಟು ಒಡನಾಟ ಹೊಂದಿದ್ದೇವೆ. ಆದರೆ, ನುಡಿಸಿರಿಗೆ ಬಂಡಾಯ ಎಂಬ ವರದಿ ನೋಡಿ ಬೇಸರವಾಯಿತು. ಕನ್ನಡ ನಾಡು ಕಟ್ಟುವ ಕೆಲಸಕ್ಕೆ ಈ ರೀತಿಯ ಶೀರ್ಷಿಕೆ, ಟೀಕೆ ಬರಬಾರದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement