ಕೃಷಿಕರು ಪ್ರಬುದ್ಧ ಆಗಿದ್ದಾರೆ: ಹೆಗ್ಗಡೆ
ವಿದ್ಯಾಗಿರಿ, ಮೂಡುಬಿದಿರೆ: ಕಳೆದ ಐದು ವರ್ಷದಲ್ಲಿ ಕೃಷಿ ಕುತೂಹಲಿಗಳು ಹೆಚ್ಚಾಗಿದ್ದಾರೆ. ಮೊದಲು ಬರಿ ದೂರದಿಂದಲೇ ನಿಂತು ಮಳಿಗೆಗಳನ್ನು ವೀಕ್ಷಿಸುತ್ತಿದ್ದ ಜನ ಈಗ, ಮಳಿಗೆಗಳಲ್ಲಿ ಏನೇನು ಸೌಲಭ್ಯಗಳಿವೆ ಎಂದು ತಿಳಿಯಲು ಆಸಕ್ತರಾಗಿದ್ದಾರೆ. ಕೃಷಿಕರು ಪ್ರಬುದ್ಧರಾಗಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ವಿಶ್ವ ನುಡಿಸಿರಿ ವಿರಾಸತ್ನಲ್ಲಿ ಭಾನುವಾರ ನಡೆದ ಕೃಷಿಮೇಳದಲ್ಲಿ 'ಬರಿದಾಗುತ್ತಿರುವ ಬತ್ತದ ಕಣಜ' ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ರೈತರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಶೇ.10ರಷ್ಟು ಕೂಡ ಅವರಿಗೆ ಮಾಹಿತಿ ಲಭ್ಯವಿಲ್ಲ. ಹಾಗಾಗಿ ಅವರಿಗೆ ಅವುಗಳ ಬಗ್ಗೆ ತಿಳುವಳಿಕೆ ನೀಡಬೇಕು. ರೈತರಿಗೆಂದೇ ಪ್ರವಾಸ ಅಧ್ಯಯನಗಳಂತಹ ವಿಶೇಷ ಯೋಜನೆಗಳಿವೆ. ಅದರಿಂದ ಎಷ್ಟೋ ರೈತರ ಬದುಕು ಬದಲಾಗಿದೆ. ಹಾಗೆಯೇ ಬೇರೆ ರೈತರು ಕೂಡ ಇಂತಹ ಯೋಜನೆಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಬತ್ತ ಸಂಸ್ಕೃತಿ ಹೆಚ್ಚಲಿ: ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ನಿರ್ದೇಶಕ ಕೃಷ್ಣಪ್ರಸಾದ್ ಮಾತನಾಡಿ, ಬತ್ತ ಸಾಲದ ಬೆಳೆಯಾಗಿದೆ. ಕರಾವಳಿಯಲ್ಲಿ ಬತ್ತ ಬೆಳೆಯುವ ಸಂಸ್ಕೃತಿ ಹೆಚ್ಚಬೇಕು. ಮುಳುಗುತ್ತಿರುವ ಹಳ್ಳಿಗಳು ಉಳಿಯಬೇಕು ಎಂದರು.
ಶಿರ್ವದ ಮಲ್ಲಿಗೆ ಸ್ವಸಹಾಯ ಸಂಘದ ರಾಘವೇಂದ್ರ ನಾಯಕ್, ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತರಾದ ಸೀತಾರಾಮ ಶೆಟ್ಟಿ ಕೃಷಿ ಅನುಭವ ಹಂಚಿಕೊಂಡರು.
-ಅಮೂಲ್ಯ, ವಿದ್ಯಾರ್ಥಿನಿ