ನಾಳೆ ಪ್ರತಿಭಟನೆ
ವಿಟ್ಲ: ವಿಟ್ಲ ಪೇಟೆಯ ರಸ್ತೆ ವಿಸ್ತರಣೆ ಕಾಮಗಾರಿ ಇನ್ನೂ ಸಮರ್ಪಕವಾಗಿ ಸಾಗುತ್ತಿಲ್ಲ. ಕೆಲವು ಕಡೆ ತಾರತಮ್ಯನೀತಿ ಅನುಸರಿಸಿ, ಬೇರೆ ಕಡೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದಲ್ಲಿ ವಿಟ್ಲ ನಗರ ಬಿಜೆಪಿಯ ನೇತೃತ್ವದಲ್ಲಿ ಡಿ.24ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಲೋಕನಾಥ ಶೆಟ್ಟಿ ಮತ್ತು ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷ ವಿ. ರಾಮದಾಸ ಶೆಣೈ ತಿಳಿಸಿದ್ದಾರೆ. ಅವರು ವಿಟ್ಲ ಅತಿಥಿಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೇಶನ ಖರೀದಿಯ ನೋಂದಣಿ ಶುಲ್ಕವನ್ನು ಏಕಾಏಕಿ ಏರಿಸಲಾಗಿದೆ. ಗುಟ್ಕಾ ನಿಷೇಧ ಕಾನೂನು ಜಾರಿಯಾಗಿದ್ದರೂ ರಾಜ್ಯದಲ್ಲಿ ರಾಜಾರೋಷವಾಗಿ ಗುಟ್ಕಾ ಮಾರಾಟ ನಡೆಯುತ್ತಲೇ ಇದೆ. ಈ ಎಲ್ಲ ಕಾರಣಗಳಿಂದ ಬೇಸತ್ತು ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಹೇಳಿದರು. ವಿಟ್ಲ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಅರುಣ ವಿಟ್ಲ, ತಾಪಂ ಸದಸ್ಯೆ ಉಷಾ ಕೆ., ವಿಟ್ಲ ನಗರ ಬಿಜೆಪಿ ಕಾರ್ಯದರ್ಶಿ ಅಣ್ಣು ಪೂಜಾರಿ, ಸಂಘಟನಾ ಕಾರ್ಯದರ್ಶಿ ಮೋಹನ ಸೇರಾಜೆ ಉಪಸ್ಥಿತರಿದ್ದರು.