ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಸಲ್ಲಿಸಿದ ಪ್ರಾಚೀನ ದಾಖಲೆಗಳು ಗೋವಿಂದ ಪೈ ಸಂಗ್ರಹಿಸಿದ್ದು: ಮೊಯ್ಲಿ
ಮಂಗಳೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ಸಲ್ಲಿಸಿದ ಭಾಷೆ ಪ್ರಾಚೀನತೆ ದಾಖಲೆಗಳಲ್ಲಿ ಮಂಜೇಶ್ವರ ಗೋವಿಂದ ಪೈಗಳು ನೀಡಿದ್ದೇ ಹೆಚ್ಚು ಎಂದು ಕೇಂದ್ರ ಇಂಧನ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಮಂಜೇಶ್ವರ ಗೋವಿಂದ ಪೈಗಳ ಮನೆಯಲ್ಲಿ ಸೋಮವಾರ ಸ್ಮಾರಕ ರಕ್ಷಣೆಗಾಗಿ ರೂಪಿಸಿದ ಗಿಳಿವಿಂಡು ಯೋಜನೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬಹುಭಾಷೆ ವಿದ್ವಾಂಸ ಪೈಗಳು ರಚಿಸಿದ ಕೃತಿಗಳನ್ನು ಜತನದಿಂದ ಕಾಪಿಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ರಾಷ್ಟ್ರಕವಿ ವಾಸವಾಗಿದ್ದ ಮನೆಯನ್ನು ಸ್ಮಾರಕವಾಗಿ ಮಾಡಿ ಗೌರವಯುತವಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಯೋಜನೆ ಅನ್ವಯ ಕಾಮಗಾರಿಗಳು ಒಂದು ವರ್ಷದೊಳಗೆ ಮುಗಿಸುವಂತೆ ವೀರಪ್ಪ ಮೊಯ್ಲಿ ತಾಕೀತು ಮಾಡಿದರು. ಸಂಸದ ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಡಿ.ಕೆ.ಚೌಟ ಸ್ವಾಗತಿಸಿದರು.