ಜಮೀನು ವಿವಾದ, ಪರಸ್ಪರ ಹಲ್ಲೆ: ಮೂವರು ಆಸ್ಪತ್ರೆಗೆ
ಪುತ್ತೂರು: ಜಮೀನು ತಕರಾರು ವಿಷಯಕ್ಕೆ ಸಂಬಂಧಿಸಿ ಕುಟುಂಬದೊಳಗೆ ಪರಸ್ಪರ ಹಲ್ಲೆ ನಡೆಸಿ ಇತ್ತಂಡದ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಂದತ್ತಡ್ಕ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಂದತ್ತಡ್ಕ ನಿವಾಸಿ ಮಾಯಿಲ ನಾಯ್ಕ ಎಂಬವರ ಪುತ್ರ ಶೀನಪ್ಪ ನಾಯ್ಕ (40), ಅವರ ಸಹೋದರ ಈಶ್ವರ ನಾಯ್ಕ ಎಂಬವರ ಪುತ್ರ ಸಂತೋಷ (23) ಮತ್ತು ನಾರಾಯಣ ನಾಯ್ಕ(43) ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶೀನಪ್ಪ ನಾಯ್ಕ, ತಮ್ಮ ಜಾಗದಲ್ಲಿ ತೆಂಗಿನ ಸಸಿ ನೆಡುತ್ತಿದ್ದ ಸಂದರ್ಭ ಅಲ್ಲಿಗೆ ಆಗಮಿಸಿದ ದೊಡ್ಡಪ್ಪನ ಪುತ್ರ ನಾರಾಯಣ ನಾಯ್ಕ ಕತ್ತಿಯಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಬಂದ ಸಂತೋಷ್ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ನಾರಾಯಣ ನಾಯ್ಕ, ತನ್ನ ಗದ್ದೆಯ ಬದಿಯಲ್ಲಿನ ನೀರು ಹರಿದುಹೋಗುವ ಸ್ಥಳ ತುಂಡರಿಸಿದ ಬಗ್ಗೆ ಪ್ರಶ್ನಿಸಿದ ತನಗೆ ಚಿಕ್ಕಪ್ಪನ ಮಗನಾದ ಶೀನಪ್ಪ ನಾಯ್ಕ, ಆತನ ಪತ್ನಿ ಪಾರ್ವತಿ, ಸಂಬಂಧಿಕರಾದ ಈಶ್ವರ ನಾಯ್ಕ, ಅಶೋಕ, ಸಂತೋಷ, ರವೀಂದ್ರ ಮತ್ತು ಚಂದ್ರ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಡಕೆ ಕದ್ದು ತಲೆಮರೆಸಿಕೊಂಡ ಆರೋಪಿ 11 ವರ್ಷ ಬಳಿಕ ಸೆರೆ
ಸುಳ್ಯ: 11 ವರ್ಷಗಳ ಹಿಂದೆ ಅಡಕೆ ಕದ್ದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 16.07.2002ರಲ್ಲಿ ಸುಳ್ಯ ಗಾಂಧಿ ನಗರದ ಮಹಮ್ಮದ್ ಮುಸ್ತಾಫ ಎಂಬವರಿಗೆ ಸೇರಿದ ಅಡಕೆ ಗೋಡೌನ್ನಿಂದ ರು. 75 ಸಾವಿರ ಮೌಲ್ಯದ ಸುಮಾರು 27 ಗೋಣಿಯಷ್ಟು ಒಣ ಅಡಕೆಯನ್ನು ಕಾಸರಗೋಡಿನ ಪಾಣತ್ತೂರು ಚೆಂಬೇರಿಯ ಅಬ್ದುಲ್ಲ ಎಂಬಾತ ಕಳವುಗೈದಿದ್ದ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುವ ಸಂದರ್ಭ ಅಬ್ದುಲ್ಲ ವಿದೇಶಕ್ಕೆ ಹೋಗಿದ್ದ. ಎರಡು ವರ್ಷಗಳ ಹಿಂದೆ ವಿದೇಶದಿಂದ ಬಂದ ಈ ವ್ಯಕ್ತಿ ಪಾಣತ್ತೂರಿನಲ್ಲಿ ತರಕಾರಿ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಈ ಮಾಹಿತಿಯನ್ನು ಪಡೆದ ಸುಳ್ಯ ಪೊಲೀಸರು ಡಿ.21ರಂದು ಆತನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ಜ.4ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.