ಮಂಗಳೂರು- ಬೆಂಗಳೂರು, ಹಾಸನ- ಮೈಸೂರು ಗ್ಯಾಸ್ ಪೈಪ್ಲೈನ್ 2015ಕ್ಕೆ ಪೂರ್ಣ
ಮಂಗಳೂರು: ಮಂಗಳೂರು - ಬೆಂಗಳೂರು ಮತ್ತು ಹಾಸನ- ಮೈಸೂರು ಗ್ಯಾಸ್ ಪೈಪ್ ಲೈನ್( 362 ಕಿ.ಮೀ. ಉದ್ದ) ಯೋಜನೆ 2015 ನವೆಂಬರ್ ಒಳಗೆ ಪೂರ್ಣಗೋಳ್ಳಲಿದೆ ಎಂದು ಕೇಂದ್ರ ಇಂಧನ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮೊಯ್ಲಿ, ರು. 701 ಕೋಟಿ ವೆಚ್ಚದ ಯೋಜನೆ ಜಾರಿಗೆ ಬಂದರೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶೇ.50 ಎಲ್ಪಿಜಿ ಟ್ಯಾಂಕರ್ಗಳ ಸಾಗಾಟ ಕಡಿಮೆಯಾಗಲಿದೆ. ಹೆದ್ದಾರಿಯಲ್ಲಿ ಟ್ಯಾಂಕರ್ ಅನಾಹುತ ತಡೆಗೆ ಎಚ್ಪಿಸಿಎಲ್ ಸಂಸ್ಥೆಯಿಂದ ತುರ್ತು ನಿಯೋಜನೆ ವಾಹನ ವ್ಯವಸ್ಥೆ ಮಾಡಲಾಗಿದೆ.
ಮೈಸೂರಲ್ಲಿ ಸ್ಟೇಷನ್ ಸ್ಥಾಪನೆಗೆ 2.47 ಎಕರೆ ಜಾಗ ಮತ್ತು ಮತ್ತು ಹಾಸನದಲ್ಲಿ ಸ್ಟೇಶನ್ ಸ್ಥಾಪನೆಗೆ 9.93 ಎಕರೆ ಜಾಗ ಸ್ವಾಧೀನ ಮಾಡಲಾಗಿದೆ. ನೆರಿಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಜಾಗ ಸ್ವಾಧೀನ ಕಾರ್ಯ ಶುರುವಾಗಿದೆ ಎಂದರು.
ಟ್ರಾನ್ಸ್ಪೋರ್ಟ್ ಹಬ್: ಎಲ್ಪಿಜಿ ಸಾಗಾಟ ಮಾಡುವ ಎಚ್ಪಿಸಿಎಲ್ ಟ್ಯಾಂಕರ್ ನಿಲುಗಡೆ ಚಾಲಕರಿಗೆ ಸುಸಜ್ಜಿತ ವಿಶ್ರಾಂತಿ ಸೌಲಭ್ಯ ಒದಗಿಸುವ ಟ್ರಾನ್ಸ್ಪೋರ್ಟ್ ಹಬ್ ಜನವರಿಯಲ್ಲಿ ಮಂಗಳೂರಲ್ಲಿ ಎಚ್ಪಿಸಿಎಲ್ ಆವರಣದಲ್ಲಿ ಆರಂಭವಾಗಲಿದೆ. 1.2 ಕೋಟಿ ಪೈಲಟ್ ಯೋಜನೆ ಮಂಗಳೂರಲ್ಲಿ ಆರಂಭಿಸಲಾಗುವುದು. ಬಳಿಕ ಈ ಸೌಲಭ್ಯ ಇತರೆಡೆ ವಿಸ್ತರಿಸಲಾಗುವುದು. ಹಬ್ನಲ್ಲಿ 60 ಚಾಲಕರು, ಸಹಾಯಕರು ವಿಶ್ರಾಂತಿಗೆ ವ್ಯವಸ್ಥೆ. ವೈದ್ಯಕೀಯ ಕೋಣೆ, ವೈದ್ಯರು ಎರಡು ಗಂಟೆ ಲಭ್ಯರಿರುವಂತೆ ವ್ಯವಸ್ಥೆ ಮಾಡಲಾಗುವುದು. ಗ್ರಂಥಾಲಯ, ಯೋಗ, ಜಿಮ್, ಬೇಕರಿ, ಮಳಿಗೆ, ಎಟಿಎಂ ಇರಲಿದೆ. ಪೆಟ್ರೋಲಿಯಂ ಕಂಪೆನಿಗಳಿಗೂ ಟ್ರಾನ್ಸ್ಪೋರ್ಟ್ ಹಬ್ಗಳನ್ನು ತೆರೆಯುವಂತೆ ಸೂಚಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಚ್ಪಿಸಿಎಲ್ ಜಂಟಿ ಕಾರ್ಯ ನಿರ್ವಾಹಕ ನಿರ್ದೇಶಕ ವೈ.ಕೆ.ಗಾವಳಿ, ಎಂಆರ್ ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಪಿ. ಉಪಾಧ್ಯ ಮತ್ತಿತರರು ಇದ್ದರು.
ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ: ಮೊಯ್ಲಿ
ಮಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ತನ್ನ ಮಗ ಹರ್ಷ ಮೊಯ್ಲಿ 1980ರಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದಾನೆ. ನಾನು ಮಗನನ್ನು ಪ್ರಮೋಟ್ ಮಾಡುವ ಪ್ರಶ್ನೆಯೇ ಇಲ್ಲ. ಅವನಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸುವ ಅರ್ಹತೆ ಇದೆ. ಟಿಕೆಟ್ ಕೊಡುವುದು ಬಿಡುವುದು ಪಕ್ಷಕ್ಕೆ ಸೇರಿದೆ ಎಂದರು. ಪದೇ ಪದೇ ಇಲ್ಲಿಗೆ ಬರುವುದು ಸ್ಪರ್ಧೆಗೆ ಎಂದು ತಿಳಿಯುವುದು ಬೇಡ ಎಂದರು. ಹೆಚ್ಚುವರಿ ಖಾತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಸಚಿವೆ ಜಯಂತಿ ನಟರಾಜನ್ ಅತ್ಯುತ್ತಮ ಕಾರ್ಯ ಮಾಡಿದ್ದಾರೆ, ನಾನು ಅದನ್ನು ಕೇವಲ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು. ಅಡಿಕೆಯನ್ನು ನಿಷೇಧ ಮಾಡುವ ಯಾವುದೇ ಪ್ರಸ್ತಾಪ ಇಲ್ಲ. ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಜತೆ ಈ ಬಗ್ಗೆ ಚರ್ಚಿಸಿದ್ದೇನೆ, ಅಡಕೆ ಬೆಳೆಗಾರರು ಚಿಂತಿಸುವ ಅವಶ್ಯಕತೆ ಇಲ್ಲ. ಈ ಗಲಾಟೆ ಯಾವುದೋ ಸಂಶೋಧನೆ ವರದಿಯಿಂದ ಹುಟ್ಟಿರಬೇಕು ಎಂದರು.