ಮೂಢನಂಬಿಕೆ ನಿಷೇಧ ಕಾಯ್ದೆ ತಡೆಗೆ ರಾಜ್ಯವ್ಯಾಪಿ ಹೋರಾಟ
ಮಂಗಳೂರು: ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಅವಕಾಶ ನೀಡಬಾರದು. ಕಾಯ್ದೆ ಜಾರಿಯಾದರೆ ಹಿಂದೂ ಸಂಸ್ಕೃತಿ, ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಬೀಳಲಿದೆ. ಇದಕ್ಕಾಗಿ ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧರಾಗುವಂತೆ ಸ್ವಾಮೀಜಿಗಳ ಸಮೂಹ ಕರೆ ನೀಡಿದೆ.
ವಿಶ್ವಹಿಂದು ಪರಿಷತ್ ಉಪಸಮಿತಿಯಾದ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಸಮಿತಿ ವತಿಯಿಂದ ಸೋಮವಾರ ಪುರಭವನದಲ್ಲಿ ನಡೆದ ಧರ್ಮಾದೇಶ ಸಭೆಯಲ್ಲಿ ಐವರು ಪ್ರಮುಖ ಸ್ವಾಮೀಜಿಗಳು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಗಳನ್ನು ಖಂಡಿಸಿ, ಹೋರಾಟಕ್ಕೆ ಸಿದ್ಧರಾಗುವುಂತೆ ಹಿಂದೂ ಸಮಾಜಕ್ಕೆ ಕರೆ ನೀಡಿದರು.
ಕೋಲ್ಯ ಶ್ರೀ ರಮಾನಂದ ಸ್ವಾಮೀಜಿ ಮಾತನಾಡಿ, ಸಂಸ್ಕಾರ ಕೊರತೆಯ ಆಳುವವರು ಆಚಾರ, ಪದ್ಧತಿಯನ್ನು ಮೂಢನಂಬಿಕೆ ಎಂದು ಕರೆಯುತ್ತಿದ್ದಾರೆ. ನಾಡಿನ ಸಂಸ್ಕೃತಿ ಅರಿಯದವರು ದೇಶವನ್ನು ಸದೃಢಗೊಳಿಸಲು ಸಾಧ್ಯವಿಲ್ಲ. ಇಂಥ ಸರ್ಕಾರವನ್ನು ಪ್ರಜ್ಞಾವಂತ ನಾಗರಿಕರು ಇಳಿಸುವ ಕೆಲಸ ಮಾಡಬೇಕು ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಧರ್ಮದ ಮೇಲಿರುವ ಪ್ರೀತಿ ಮರೆತರೆ ಯಾರೂ ಉಳಿಯುವುದಿಲ್ಲ, ದೇಶವೂ ಇರುವುದಿಲ್ಲ. ಮೂಢನಂಬಿಕೆ ನಿಷೇಧ ಹೆಸರಲ್ಲಿ ಸರ್ಕಾರ ಜನರ ನಂಬಿಕೆ ಮೇಲೆ ಕೊಡಲಿ ಏಟು ಹಾಕುತ್ತಿದೆ. ಈಗಲಾದರೂ ಸರ್ಕಾರ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಚುನಾವಣೆಗೆ ಮುನ್ನ ಹೋಮ ಹವನ ನಡೆಸುವ ಈ ಮಂತ್ರಿಗಳಿಗೆ ಅದು ಮೂಢನಂಬಿಕೆ ಎಂದು ಗೊತ್ತಾಗಲಿಲ್ಲವೇ? ಆಕಾಂಕ್ಷೆ ಈಡೇರಿದ ಬಳಿಕ ಎಡಪಂಥೀಯರನ್ನು ಛೂ ಬಿಟ್ಟು ಹಿಂದು ಧರ್ಮ ಒಡೆಯುವ ಹುನ್ನಾರ ನಡೆಸಿರುವುದು ಅಕ್ಷಮ್ಯ. ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಸರ್ಕಾರವನ್ನು ಮುಗಿಸಲು ಜನತೆ ಒಗ್ಗೂಡಬೇಕು ಎಂದರು.
ಹಿಂದೂ ಧರ್ಮವನ್ನು ಗುರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು. ಈ ಹಿಂದೆ ಶಬರಿಮಲೆ ಯಾತ್ರೆ ಮಾಡಿದ್ದ ಈಗಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಈಗ ಏಕೆ ಮೌನವಾಗಿದ್ದಾರೆ. ಮೂಢನಂಬಿಕೆ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದರು.
ಮಾಣಿಲ ಮೋಹನಾದಸ ಸ್ವಾಮೀಜಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ಅತ್ಯಾಚಾರ, ಗೋಕಳ್ಳತನ, ಅನಾಚಾರಗಳು ಹೆಚ್ಚುತ್ತಿವೆ. ಈ ವಿಚಾರಗಳನ್ನು ಮನೆ ಮನೆಗಳಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜನರ ನಂಬಿಕೆ ಮಾಲೆ ಸವಾರಿ ಮಾಡುವ ಸರ್ಕಾರ ವಿರುದ್ಧ ಜನತೆ ಹೋರಾಟಕ್ಕೆ ಇಳಇಯಬೇಕು. ಕರುನಾಡನ್ನು ಕರಾಳ ನಾಡಾಗಿ ಪರಿವರ್ತಿಸಲು ಹೊರಟಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮುಕ್ತಾನಂದ ಸ್ವಾಮೀಜಿ ಹೇಳಿದರು.
ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿ, ಧರ್ಮಾನಂದ ಸ್ವಾಮೀಜಿ, ಮುಂಜುನಾಥ ಸ್ವಾಮಿಜಿ, ಹಿಂದು ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್, ವೇದಮೂರ್ತಿ ರಾಮದಾಸ ಆಸ್ರಣ್ಣ, ಅರ್‌ಎಸ್‌ಎಸ್ ವಿಭಾಗ ಸಂಚಾಲಕ ಪಿ.ವಾಮನ ಶೆಣೈ, ಸಮಿತಿ ಪ್ರಾಂತ ಸಂಚಾಲಕ ಸೂರ್ಯ ನಾರಾಯಣ ಇದ್ದರು.
ರಕ್ಷಣೆ ಸಮಿತಿ ಅಧ್ಯಕ್ಷ ಕಮಲಾಕ್ಷ ಗಂಧಕಾಡು ಸ್ವಾಗತಿಸಿದರು. ಸಂಚಾಲಕ ಕಟೀಲ್ ದಿನಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎನ್.ಕೆ. ಸಾಲ್ಯಾನ್ ವಂದಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು.