ಲಾರಿ-ಬೈಕ್ ಡಿಕ್ಕಿ; ಸವಾರಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಲಾರಿ ಮತ್ತಿ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ದಾಮೋದರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟ್ಯಾಂಕರ್ ಅಪಘಾತ: ಚಾಲಕ ಗಂಭೀರ
ಉಪ್ಪಿನಂಗಡಿ: ಪೆರ್ನೆ ಬಳಿ ಸಿಮೆಂಟ್ ಮಿಕ್ಸಿಂಗ್ ಸಾಗಾಟದ ಟ್ಯಾಂಕರ್ ಅಪಘಾತಕ್ಕೀಡಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಗಾಯಾಳು ಟ್ಯಾಂಕರ್ ಚಾಲಕ ಜಾಹೀರ್ ಅಹಮ್ಮದ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮಧ್ಯಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಪುತ್ತೂರು ಟ್ರಾಫಿಕ್ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ನಾಪತ್ತೆ
ಗಂಗೊಳ್ಳಿ: ಇಲ್ಲಿನ ತ್ರಾಸಿ ಗ್ರಾಮದ ಅನಗೋಡು ಎಂಬಲ್ಲಿಂದ ಯುವತಿಯೊಬ್ಬಳು ಕಾಣೆಯಾದ ಘಟನೆ ಭಾನುವಾರ ನಡೆದಿದೆ. ಕಾಣೆಯಾದವರು ಸುಶ್ಮಿತಾ (19), ಈಕೆ ಇಲ್ಲಿನ ಚನ್ನಪ್ಪ ಪೂಜಾರಿ ಎಂಬವರ ಮಗಳು, ಕುಂದಾಪುರದ ಕಂಪ್ಯೂಟರ್ ಅಂಗಡಿಗೆ ಕಳೆದ 5 ತಿಂಗಳಿನಿಂದ ಕೆಲಸಕ್ಕೆ ಹೋಗುತ್ತಿದ್ದು, ಭಾನುವಾರ ಅಂಗಡಿಗೆ ರಜೆ ಇದ್ದರೂ ಕೆಲಸ ಇದೆ ಎಂದು ಮನೆಯಲ್ಲಿ ಹೇಳಿ ಕುಂದಾಪುರಕ್ಕೆ ಹೋಗಿದ್ದವಳು ಮನೆಗೆ ಹಿಂದಕ್ಕೆ ಬಂದಿಲ್ಲ ಎಂದು ತಂದೆ ಚನ್ನಪ್ಪ ಪೂಜಾರಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಡೆದಾಟ: ಐವರ ಬಂಧನ
ಕಾಪು : ಇಲ್ಲಿನ ಕಟಪಾಡಿ ಗ್ರಾಮದ ಪಳ್ಳಿಗುಡ್ಡೆ ಮೈದಾನದಲ್ಲಿ ಹೊಡೆದಾಡುತ್ತಿದ್ದ 5 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ರಾಹುಲ್ ರಾವ್ (23), ಹರೀಶ ಪೂಜಾರಿ (34), ಪ್ರಸನ್ನ ಶೆಟ್ಟಿಗಾರ್ (27), ರಿತೇಶ್ ಶೆಟ್ಟಿ (27) ಮತ್ತು ರಾಘವೇಂದ್ರ (21) ಎಂದು ಗುರುತಿಸಲಾಗಿದ್ದು, ಅವರು ಭಾನುವಾರ ರಾತ್ರಿ 9 ಗಂಟೆಗೆ ಠಾಣೆಗೆ ಬಂದ ಪೋನ್ ಕರೆಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಈ ಯುವಕರು ಪಳ್ಳಿಗುಡ್ಡೆ ಮೈದಾನದಲ್ಲಿ 3 ಕಾರುಗಳನ್ನು ನಿಲ್ಲಿಸಿ, ಪರಸ್ಪರ ಹೊಡೆದುಕೊಳ್ಳುತ್ತ ಸಾರ್ವಜನಿಕರ ಶಾಂತಿಯನ್ನು ಕದಡುತ್ತಿದ್ದರು. ಅವರನ್ನು ಪೊಲೀಸರು ಬಂಧಿಸಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಟ್ರೋಲ್ ಲೂಟಿಕೋರರ ದಾಂದಲೆ
ಮಂಗಳೂರು: ನಗರದ ಮೈದಾನ 3ನೇ ರಸ್ತೆ ಬಳಿ ಕಟ್ಟಡಕ್ಕೆ ನುಗ್ಗಿದ ದುಷ್ಕರ್ಮಿಗಳು ಭದ್ರತೆ ಸಿಬ್ಬಂದಿಯನ್ನು ಬೆದರಿಸಿ ಬೈಕ್ಗಳು ಪೆಟ್ರೋಲ್, ಕಾರ್ಗಳು ಡೀಸೆಲ್ ಲೂಟಿ ಮಾಡಿದ್ದಾರೆ. ಕಾರುಗಳ ಗಾಜುಗಳನ್ನು ಹುಡಿ ಮಾಡಿದ್ದಾರೆ. ಭಾನುವಾರ ಮಧ್ಯರಾತ್ರಿ ವೇಳೆ ಬೈಕ್ನಲ್ಲಿ ಬಂದ 6 ಮಂದಿಯ ಗುಂಪು ಭದ್ರತೆ ಸಿಬ್ಬಂದಿಯನ್ನು ಬೆದರಿಸಿದ್ದು, ದಾಂದಲೆ ನಡೆಸಿದೆ. ರಾತ್ರಿ ವೇಳೆ ದಾಂದಲೆ ನಡೆದರೂ ಪೊಲೀಸರು ಇದುವರೆಗೆ ಯಾರೊಬ್ಬ ಆರೋಪಿಯನ್ನು ಬಂಧಿಸಿಲ್ಲ. ನಗರದಲ್ಲಿ ನಾಗರಿಕರ ಮೇಲೆ ನಿತ್ಯ ದಾಳಿಗಳು ಹೆಚ್ಚುತ್ತಿದೆ.
ದುರಾಚಾರಿಗಳಿಗೆ ರಾಜಕೀಯ ರಕ್ಷಣೆ?
ಮಂಗಳೂರು: ವೈದ್ಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯನ್ನು ಅಹಪರಿಸಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಮಾಡಿ ಚಿತ್ರೀಕರಿಸಿದ ಹೀನಾತಿ ಹೀನ ಆರೋಪಿಗಳ ರಕ್ಷಣೆಗೆ ರಾಜಕೀಯ ಪುಢಾರಿಗಳು ಯತ್ನಿಸುತ್ತಿದ್ದಾರೆ. ಎಲ್ಲೆಂದರಲ್ಲಿ ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರದಷ್ಟೇ ಹೀನ ಕೃತ್ಯ ನಡೆಸಿ ಅದನ್ನು ಚಿತ್ರೀಕರಿಸಿದ ದುಷ್ಕರ್ಮಿಗಳು ಪೊಲೀಸರಿಗೂ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಅಪಹರಣ, ಪೊಲೀಸರ ಮೇಲೆ ದಾಳಿಯಿಂದ ಜನರು ತಿರುಗಾಡಲೇ ಬೆಚ್ಚಿ ಬೀಳುವ ಪರಿಸ್ಥಿತಿ ಎದುರಾಗಿದೆ.
ಪೆರಾಜೆ ಬಳಿ ಬೈಕ್ ಪಲ್ಟಿ: ಸವಾರ ಸಾವು
ವಿಟ್ಲ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕೊಂದು ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮಧ್ಯೆ ರಾತ್ರಿ ಸಂಭವಿಸಿದೆ. ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಅಣ್ಣಿ ಪೂಜಾರಿ ಅವರ ಪುತ್ರ ಉಮೇಶ್ ಪೂಜಾರಿ (38) ಮೃತರು. ಸಹ ಸವಾರ ಸ್ಥಳೀಯ ನಿವಾಸಿ ಪುರುಷೋತ್ತಮ ಅವರ ತಲೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಣಿಯ ನೇರಳೆಕಟ್ಟೆಯಲ್ಲಿ ಉಮೇಶ್ ಪೂಜಾರಿ ಹಾಗೂ ಅವರ ಸ್ನೇಹಿತ ಪುರುಷೋತ್ತಮ ಅವರು ಮೆಹೆಂದಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಮಾಣಿ ದೂರವಾಣಿ ಕೇಂದ್ರ ಸಮೀಪ ಬೈಕ್ ಸ್ಕಿಡ್ ಆಗಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಉಮೇಶ್ ಪೂಜಾರಿ ಅವರ ತಲೆಗೆ ತೀವ್ರ ರೀತಿಯಲ್ಲಿ ಗಾಯವಾಗಿದ್ದು, ರಸ್ತೆಯಲ್ಲಿಯೇ ಮೃತಪಟ್ಟಿದ್ದಾರೆ. ಮಧ್ಯೆ ರಾತ್ರಿ ಮಾಣಿ ಪರಿಸರದಲ್ಲಿ ಯಾರೂ ಇಲ್ಲದೆ ಇದ್ದಾಗ ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ರಿಕ್ಷಾ ಚಾಲಕರಾದ ಜುಬೈರ್ ಹಾಗೂ ಅಝೀಝ್ ಎಂಬವರು ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.