ಸುಳ್ಯ: ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ನೋಟಿಸ್
ಸುಳ್ಯ: ಸುಳ್ಯದ ನ್ಯಾಯವಾದಿ, ಪಂಜದ ನೋಟರಿಯವರ ನಕಲಿ ಛಾಪಾ ಕಾಗದ ಪ್ರಕರಣದಲ್ಲಿ ಆರೋಪಿಯಾಗಿ ಠಾಣೆಗೆ ಹೋದಾಗ ಅವರನ್ನು ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಬಂಧಿಸಿದ್ದರೂ ನ್ಯಾಯಾಲಯಕ್ಕೆ ಹಾಜರುಪಡಿಸದೆ ಅದೇ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು ಸರಿಯಲ್ಲವೆಂದೂ, ಜಾಮೀನು ರದ್ದು ಪಡಿಸುವಂತೆಯೂ ಕೋರಿ ಫಿರ್ಯಾದುದಾರರಾದ ಮಂಜುಳಗಿರಿ ತಿಮ್ಮಪ್ಪಯ್ಯನವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸುಬ್ರಹ್ಮಣ್ಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಮಾಡಲಾಗಿದೆ.
ಕಳೆದ ವರ್ಷ ಕೂತ್ಕುಂಜ ಗ್ರಾಮದ ಮಂಜುಳಗಿರಿ ತಿಮ್ಮಪ್ಪಯ್ಯ ಎಂಬವರು ಕರಿಕ್ಕಳದ ಮಹೇಶ್ ಕುಮಾರ್ ಎಂಬವರಿಂದ ಕಾರೊಂದನ್ನು ಖರೀದಿಸಿ, ಪಂಜದ ನೋಟರಿವರ ಮೂಲಕ ಕರಾರು ಪತ್ರ ಮತ್ತು ಜಿ.ಪಿ.ಎ. ಮಾಡಿಸಿಕೊಂಡಿದ್ದರು. ಆದರೆ, ಇದಕ್ಕೆ ಬಳಸಿದ ಛಾಪಾ ಕಾಗದಗಳನ್ನು ಸಿಂಡಿಕೇಟ್ ಬ್ಯಾಂಕ್‌ಗೆ ಹಾಜರು ಪಡಿಸಿದಾಗ ಅವುಗಳು ನಕಲಿ ಎಂಬ ಅಭಿಪ್ರಾಯ ದೊರಕಿದ ಮೇರೆಗೆ ತಿಮ್ಮಪ್ಪಯ್ಯನವರು ಅವುಗಳನ್ನು ಪರಿಶೀಲಿಸಿದಾಗ ಆ ಛಾಪಾ ಕಾಗದಗಳನ್ನು ಅವರು ವಿತರಿಸಿಲ್ಲ ಎಂದು ತಿಳಿದು ಬಂದಿತ್ತು. ಬಳಿಕ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ 2011ರ ಜೂ. 16ರಂದು ನೋಟರಿ ವಿರುದ್ಧ ಕ್ರಿಮಿನಲ್ ಕೇಸನ್ನು ದಾಖಲಿಸಿದಾಗ ಅಂದಿನ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಣ್ ಕುಮಾರ್ ನೋಟರಿವರನ್ನು ಠಾಣೆಗೆ ಕರೆತಂದು ಅಂದೇ ರಾತ್ರಿ ಬಿಡುಗಡೆಗೊಳಿಸಿದ್ದರು.
ಬಳಿಕ ಆರೋಪಿ ನಿರೀಕ್ಷಣಾ ಜಾಮೀನಿಗೋಸ್ಕರ ಪುತ್ತೂರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪುತ್ತೂರು ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿತ್ತು. ತದನಂತರ ಹೈಕೋರ್ಟ್‌ನಲ್ಲಿ ಕೂಡ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಕೆಲವು ದಿನಗಳಲ್ಲಿ ಅವರು
ಆದೇಶವನ್ನು ಪುನಃ ಪರಿಶೀಲಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದಾಗ ಆರೋಪಿಯನ್ನು ಪೊಲೀಸರು ಈ ಹಿಂದೆಯೇ ಅಪರಾಧ ಪ್ರಕ್ರಿಯೆ ಕಲಂ 169ರಂತೆ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದರಿಂದ ಈ ಹಂತದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನಿನ ಅಗತ್ಯವಿರುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪಿರ್ಯಾದಿ ತಿಮ್ಮಪ್ಪಯ್ಯನವರು ಈಗ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿ ಕೇಶವ ಭಟ್ಟರಿಗೆ ನೀಡಿದ್ದ ಪೊಲೀಸ್ ಬೇಲ್ ರದ್ದುಪಡಿಸುವಂತೆ ಕೋರಿದ್ದಾರೆ.
ಪಿರ್ಯಾದುದಾರರ ಅರ್ಜಿಯನ್ನು ಗಣನೆಗೆ ತೆಗೆದುಕೊಂಡ ಹೈಕೋರ್ಟ್, ಸುಬ್ರಹ್ಮಣ್ಯ ಪೊಲೀಸರಿಗೆ ಮತ್ತು ಸುಳ್ಯದ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿ ಒಂದು ವಾರದಲ್ಲಿ ಉತ್ತರ ನೀಡುವಂತೆ ಆದೇಶಿಸಿದೆ. ಪಿರ್ಯಾದುದಾರರ ಪರವಾಗಿ ಹೈಕೋರ್ಟ್ ವಕೀಲ ಎಣ್ಣೆಮಜಲ್ ಧರ್ಮಪಾಲ ವಕಾಲತ್ತು ವಹಿಸಿದ್ದಾರೆ.