ಇನ್ನೂ ಬಾರದ ಶಾರಿಕ ಮರುಮರಣೋತ್ತರ ಪರೀಕ್ಷೆ ವರದಿ
ಸುಬ್ರಹ್ಮಣ್ಯ: ಕಳೆದ ಆಗಸ್ಟ್ 11ರಂದು ನಾಪತ್ತೆಯಾಗಿ 13 ದಿನಗಳ ಬಳಿಕ ಸಮೀಪದ ಜೇನುಕೋಡಿ ಎಂಬಲ್ಲಿ ಹೊಳೆಯ ನೀರಿನಲ್ಲಿ ಪತ್ತೆಯಾದ ಚಾರ್ಮತದ ಹಸುಳೆ ಶಾರಿಕ ಮಗುವಿನ ಸಾವಿಗೆ ಸಂಬಂಧಿಸಿದಂತೆ ನಡೆದ ಮರುಮರಣೋತ್ತರ ಪರೀಕ್ಷೆಯ ವರದಿ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಮುಂದುವರಿದಿದೆ. ಪರೀಕ್ಷಾ ವರದಿ ಕುರಿತು ಅನಿಶ್ಚಿತತೆ ಇನ್ನೂ ಮುಂದುವರಿದಿದ್ದು, ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆಯೋ ಇಲ್ಲವೋ ಎಂಬ ಬಗ್ಗೆ ಕುತೂಹಲ ಮತ್ತು ವರದಿಯಲ್ಲಿ ಏನಿದೆ ಎಂಬ ಜಿಜ್ಞಾಸೆ ಜನರಲ್ಲಿ ಮೂಡಿದೆ. ಶವದ ಎಲುಬುಗಳನ್ನು ಪರೀಕ್ಷೆಗಾಗಿ ಕೊಂಡೂಯ್ದು 20 ದಿನ ಕಳೆದಿದೆ. ಇಲ್ಲಿವರೆಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸ್ ಮೂಲಗಳಿಂದ ಅಧಿಕೃತ ಮಾಹಿತಿ ಹೊರ ಬಿದ್ದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರಕಬಹುದಾದ ನಿರೀಕ್ಷೆ ಇದೆ. ಸದ್ಯ ದೊರಕಿರುವ ಮಾಹಿತಿ ಪ್ರಕಾರ ಶವದ ಎಲುಬಿನ ತುಣುಕುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸಿರುವುದರಿಂದ ವರದಿ ಬರಲು ತಡವಾಗಿ, ಅಂತಿಮ ವರದಿ ಕೈ ಸೇರಲು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.